Advertisement

ಮಲೇರಿಯಾ ನಿರ್ಮೂಲನೆ ಮಾಡಿ

04:31 PM Apr 27, 2019 | Team Udayavani |

ಯಾದಗಿರಿ: ಮಲೇರಿಯಾ ರೋಗ ನಿರ್ಮೂಲನೆ ಮಾಡುವಲ್ಲಿ ನಾಗರಿಕ ಸಮಾಜದ ಗುರುತರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮಲೇರಿಯಾ ಪ್ರಕರಣಗಳನ್ನು ಸೊನ್ನೆಗೆ ತರುವಲ್ಲಿ ಪ್ರತಿಯೊಬ್ಬರು ಶ್ರಮಿಸುವುದು ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಹಬೀಬ ಉಸ್ಮಾನ್‌ ಪಟೇಲ್ ಹೇಳಿದರು.

Advertisement

ನಗರದ ಆಕ್ಸ್‌ಫರ್ಡ್‌ ನರ್ಸಿಂಗ್‌ ಕಾಲೇಜಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಲೇರಿಯಾ ರೋಗ ಅನಾಫಿಲೀಸ್‌ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಚಳಿ, ನಡುಕ, ನಂತರ ಜ್ವರ ಬರುವುದು ರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದಾಗ ಆರೋಗ್ಯ ಇಲಾಖೆ ಸಿಬ್ಬಂದಿ ಸಂಪರ್ಕಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡಾಗ ಖಚಿತಪಟ್ಟಲ್ಲಿ ಸಂಪೂರ್ಣ ಚಿಕಿತ್ಸೆ ಪಡೆದರೆ ಗುಣಮುಖ ಹೊಂದುತ್ತಾರೆ. ಕರ್ನಾಟಕವನ್ನು 2025ರೊಳಗೆ ಮಲೇರಿಯಾ ಮುಕ್ತ ರಾಜ್ಯವನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ| ಸೂರ್ಯಪ್ರಕಾಶ ಎಂ. ಕಂದಕೂರ ಮಾತನಾಡಿ, ವಿಶ್ವ ಮಲೇರಿಯಾ ದಿನಾಚರಣೆ ಘೋಷವಾಕ್ಯ ಸೊನ್ನೆ ಮಲೇರಿಯಾ ನನ್ನಿಂದ ಪ್ರಾರಂಭ ಎಂಬುದಾಗಿದೆ. ಅದರಂತೆ ಸಾರ್ವಜನಿಕರು ಮನೆ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರು ಸಂಗ್ರಹಿಸಿದ ಬ್ಯಾರೆಲ್, ಕೊಡ ಮುಂತಾದವುಗಳನ್ನು ಸರಿಯಾಗಿ ಮುಚ್ಚಬೇಕು. ಸೊಳ್ಳೆ ಕಚ್ಚದಂತೆ ಉದ್ದನೆ ತೋಳಿನ ಅಂಗಿ ಮತ್ತು ಪ್ಯಾಂಟ್ ಧರಿಸಬೇಕು ಹಾಗೂ ಸೊಳ್ಳೆ ಬತ್ತಿ, ಸೊಳ್ಳೆ ಪರದೆ ಬಳಸಬೇಕು. ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. 2016ರಲ್ಲಿ 258, 2017ರಲ್ಲಿ 209, 2018ರಲ್ಲಿ 72 ಹಾಗೂ 2019ರಲ್ಲಿ 2 ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿಗಳಾದ ಡಾ| ಭಗವಂತ ಅನವಾರ, ತಾಲೂಕು ಆರೋಗ್ಯ ಅಧಿಕಾರಿ ಡಾ| ಹಣಮಂತರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಂಕರ ಬಿರಾದಾರ, ಆಕ್ಸ್‌ಫರ್ಡ್‌ ನರ್ಸಿಂಗ್‌ ಕಾಲೇಜು ಪ್ರಾಂಶುಪಾಲ ಪ್ರಕಾಶ್‌ ಆರ್‌. ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next