Advertisement

ಖರ್ಗೆ-ಜಾಧವ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

11:51 AM Apr 24, 2019 | Naveen |

ಕಲಬುರಗಿ: ಕಳೆದ ಸಲಕ್ಕಿಂತ ಶೇ. 2ರಷ್ಟು ಮತದಾನ ಹೆಚ್ಚಳವಾಗಿರುವುದು ಅದರಲ್ಲೂ ಗ್ರಾಮೀಣ ಭಾಗದ ಮತದಾರರಲ್ಲಿ ಕಂಡು ಬಂದಿರುವ ಉತ್ಸಾಹ ಅವಲೋಕಿಸಿದರೆ ಯಾರಿಗೆ ಅನುಕೂಲವಾಗಬಹುದೆಂಬ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಹೆಚ್ಚಿನ ಶೇಕಡಾವಾರು ಮತದಾನ ಬಿಜೆಪಿ ಅಭ್ಯರ್ಥಿ ಪರ ಅನುಕೂಲವಾಗಬಹುದೇ? ಎನ್ನುವ ನಿಟ್ಟಿನಲ್ಲಿ ಅಂದಾಜಿಸಲಾಗುತ್ತಿದೆ. ವಲಸೆ ಹೋಗಿದ್ದ ಮತದಾರರು ವಾಪಸ್ಸು ಬಂದಿರುವುದು ಜಾಧವ ಪರ ಚಲಾಯಿಸಿರುವುದಾಗಿ ತಿಳಿಸಿದ್ದಾರೆ.

Advertisement

ಮುಖ್ಯವಾಗಿ 2014ರಲ್ಲಿ 10 ಲಕ್ಷ ಮತದಾನವಾಗಿತ್ತು. ಈ ಸಲ 19.45 ಲಕ್ಷ ಮತದಾರರಲ್ಲಿ 11 ಲಕ್ಷ 55 ಸಾವಿರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹೊಸ ಮತದಾರರ ಒಲವು ಬಿಜೆಪಿ ಕಡೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಾಧವಗೆ ಸಹಾಯವಾಗುವುದೆಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಕಲಬುರಗಿ: ತೀವ್ರ ಜಿದ್ದಾ ಜಿದ್ದಿ ಕಂಡಿದ್ದ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಂದಾಜು ಶೇ. 60 ರಷ್ಟು ಮತದಾನವಾಗಿದೆ. ಕಳೆದ 20014ರ ಲೋಕಸಭೆ ಚುನಾವಣೆಯಲ್ಲಿ ಶೇ. 57.96ರಷ್ಟು ಮತದಾನವಾಗಿತ್ತು.

ಮತದಾನ ಆರಂಭವಾದ ಬೆಳಗ್ಗೆ 7ಗಂಟೆಯಿಂದಲೇ ಮತದಾರರು ತಮ್ಮ ಹಕ್ಕು ಚಲಾಯಿಸಲು ಆರಂಭಿಸಿದ್ದರೂ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4ರ ವರೆಗೆ ಮಂದಗತಿಯಲ್ಲಿ ನಡೆದು, ಸಂಜೆ ಒಂದೂವರೆ ಗಂಟೆಕಾಲ ಸ್ವಲ್ಪ ಚುರುಕಿನಿಂದ ಮತದಾನ ನಡೆಯಿತು. ಕೊನೆಗೆ ಕಳೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಗಿಂತ ಹೆಚ್ಚು ಪ್ರಮಾಣದ ಮತದಾನವಾಯಿತು.

ಒಂದೆರಡು ಕಡೆ ಅಹಿತಕರ ಘಟನೆ ಬಿಟ್ಟರೆ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ನಡೆಯಿತು. ಕಾಂಗ್ರೆಸ್‌ನ ಡಾ| ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಡಾ| ಉಮೇಶ ಜಾಧವ ಸೇರಿದಂತೆ 12 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಮೇ 23ರಂದು ಬಹಿರಂಗವಾಗಲಿದೆ.

Advertisement

ಕಲಬುರಗಿ ಉತ್ತರ ಮತಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಡೆದ ಲಾಠಿ ಚಾರ್ಜ್‌ ಹಾಗೂ ಖಾಸಗಿ ವಾಹಿನಿಯ ಕ್ಯಾಮರಾ ಒಡೆದು ಹಾಕಿರುವುದನ್ನು ಬಿಟ್ಟರೆ ಉಳಿದಂತೆ ಶಾಂತಿಯುತವಾಗಿ ಮತದಾನ ನಡೆದಿದೆ. ಹಲವು ಕಡೆ ಬೆಳಗ್ಗೆ ಇವಿಎಂ ಯಂತ್ರಗಳು ಕೈ ಕೊಟ್ಟಿದ್ದರೂ ನಂತರ ಸುಗಮವಾಗಿ ಮತದಾನ ಆರಂಭವಾಯಿತು.

ಯುವಕರಿಂದ ಹಿಡಿದು ಎಲ್ಲ ವಯೋಮಾನದವರೂ ಉತ್ಸುಕತೆಯಿಂದ ಮತಗಟ್ಟೆಗೆ ಆಗಮಿಸುತ್ತಿರುವುದು ಕಂಡು ಬಂತು. ವಯೋವೃದ್ಧರೂ ತಮ್ಮ ಹಕ್ಕು ಚಲಾಯಿಸಿದರು. ಅಂಗವಿಕಲರ ಮತದಾನಕ್ಕೆ ವಾಹನ ವ್ಯವಸ್ಥೆ ಮಾಡಲಾಗಿತ್ತು.

ಕಾಂಗ್ರೆಸ್‌ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಬಸವ ನಗರದ ಮತಗಟ್ಟೆ ಸಂಖ್ಯೆ 119ರಲ್ಲಿ ಪತ್ನಿ ರಾಧಾಬಾಯಿ ಸಮೇತ ತಮ್ಮ ಹಕ್ಕು ಚಲಾಯಿಸಿದರು. ಅದೇ ರೀತಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಚಿತ್ತಾಪುರ ತಾಲೂಕು ಗುಂಡಗುರ್ತಿ ಗ್ರಾಮದ ಮತಗಟ್ಟೆ 26ರಲ್ಲಿ ಪತ್ನಿ ಶೃತಿ ಜತೆ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ನೂತನ ಕಾಳಗಿ ತಾಲೂಕು ಬೆಡಸೂರ ತಾಂಡಾ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ವಿಧಾನಸಭಾ ಕ್ಷೇತ್ರವಾರು ಮತದಾನ
ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.59.75, ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ 50.85, ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ 56.66, ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ 62.47, ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ 68.33, ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 55.89, ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 52.21, ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 56.95 ಅಂದಾಜು ಮತದಾನವಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಂತ ಶೇ. 57. 63 ರಷ್ಟು ಮತದಾನವಾಗಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next