ಯಾದಗಿರಿ: ದೇಶಾದ್ಯಂತ ಕೋವಿಡ್-19 ನಿಯಂತ್ರಣಕ್ಕೆ 21 ದಿನಗಳ ಕಾಲ ವಿಧಿಸಿದ ಲಾಕ್‌ಡೌನ್ ಏ.14ಕ್ಕೆ ಮುಕ್ತಾಯಗೊಳ್ಳಲಿದ್ದು ಈ ಮಧ್ಯೆಯೇ ರಾಜ್ಯ ಸರ್ಕಾರ ರಾಜ್ಯಾದ್ಯಂತ ಲಾಕ್‌ಡೌನ್ ತಿಂಗಳ ಮುಕ್ತಾಯದವರೆಗೂ ಮುಂದುವರಿಸಲು ನಿರ್ಧರಿಸಿದೆ.
ಈ ಮಧ್ಯೆಯೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಪತ್ತೆಯಾಗಿಲ್ಲ. ಅಂತಹ ಜಿಲ್ಲೆಗಳಲ್ಲಿಯೂ ಲಾಕ್‌ಡೌನ್ ಇರಲಿದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವಿಸಿದೆ. ಗಡಿ ಜಿಲ್ಲೆ ಯಾದಗಿರಿ, ರಾಯಚೂರು, ವಿಜಯಪುರ ಹಾಗೂ ಕೊಪ್ಪಳ ಸೇರಿದಂತೆ 11 ಜಿಲ್ಲೆಗಳಲ್ಲಿ ಕೊರೊನಾ ಪತ್ತೆಯಾಗಿಲ್ಲ. ಈ ಜಿಲ್ಲೆಗಳಿಗೆ ವಿನಾಯಿತಿ ನೀಡಲಾಗುತ್ತದೆಯೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ರಾಜ್ಯ ಸರ್ಕಾರ ಲಾಕ್‌ಡೌನ್ ಮುಂದುವರಿಕೆ ಕ್ರಮ ಕೈಗೊಂಡಿದ್ದು, ಈ ಹಿಂದಿನಂತೆ ನಿತ್ಯ ಬಳಕೆ ವಸ್ತುಗಳು, ಹಾಲು, ಆಸ್ಪತ್ರೆ, ಔಷಧಿ , ಪೆಟ್ರೋಲ್ ಬಂಕ್ ತೆರೆದಿರಲಿದ್ದು, ಅನಗತ್ಯವಾಗಿ ರಸ್ತೆಗಿಳಿಯುವ ವಾಹನ ಸವಾರರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಗಡಿ ಜಿಲ್ಲೆ ಯಾದಗಿರಿಯಲ್ಲಿ ಶುಕ್ರವಾರ ಸಂಜೆಯಿಂದಲೇ ವಾಹನಗಳು ರಸ್ತೆಗಿಳಿಯದಂತೆ ಕ್ರಮ ವಹಿಸಲಾಗಿದ್ದು, ಪೊಲೀಸರು ಈವರೆಗೆ 900ಕ್ಕೂ ಹೆಚ್ಚು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಶನಿವಾರ ಕೂಡ ಬೆಳಗ್ಗೆಯಿಂದಲೇ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಲಾಕ್‌ಡೌನ್ ಅವಧಿ ಮುಗಿಯುವುದಕ್ಕೆ ಮೂರು ದಿನ ಬಾಕಿ ಇದ್ದು, ರಾಜ್ಯ ಸರ್ಕಾರ ಯಾವೆಲ್ಲ ಮಾರ್ಗಸೂಚಿ ನೀಡುತ್ತದೆಯೋ ಅದನ್ನಾಧರಿಸಿದ ಜಿಲ್ಲಾಡಳಿಗಳು ಕ್ರಮ ವಹಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೂ ಕಲಬುರಗಿ, ಬೀದರ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಕಾಣಿಸಿಕೊಂಡಿದ್ದು ಅಂತಹ ಜಿಲ್ಲೆಗಳಲ್ಲಿ ಅವಧಿ ವಿಸ್ತರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಯಾವ ಜಿಲ್ಲೆಯ ಜನರು ಆ ಜಿಲ್ಲೆ ಬಿಟ್ಟು ಇತರೆ ಜಿಲ್ಲೆಗಳಿಗೆ ಸಂಚರಿಸದಂತೆ ಕ್ರಮ ಕೈಗೊಂಡು ಇತರೆ ಜಿಲ್ಲೆಗಳಿಗೆ ಲಾಕ್‌ಡೌನ್‌ನಿಂದ ಮುಕ್ತಗೊಳಿಸಲಿದೆಯೇ ಎನ್ನುವ ಪ್ರಶ್ನೆಗೆ ಸರ್ಕಾರದ ಕ್ರಮವೇ ಉತ್ತರಿಸಲಿದೆ.
ವಸ್ತುಗಳ ಬೆಲೆ ಏರಿಕೆ
ಲಾಕ್‌ಡೌನ್ ಹಿನ್ನೆಲೆ ತರಕಾರಿ ಸೇರಿದಂತೆ ನಿತ್ಯ ಬಳಕೆ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರುತ್ತಿದ್ದು ಇದರಿಂದ ಜನರು ಅನಿವಾರ್ಯವಾಗಿ ಕೊಂಡುಕೊಳ್ಳುತ್ತಿದ್ದಾರೆ. ತಂಬಾಕು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದು, 5, 10, 17 ರೂ.ಗೆ ಮಾರಾಟವಾಗುತ್ತಿದ್ದ ಗುಟ್ಕಾ ಬೆಲೆ 15, 25, 50 ರೂ.ಗೆ ಏರಿಕೆಯಾಗಿದ್ದರೂ ಸಿಗುತ್ತಿಲ್ಲ.
ಜಿಲ್ಲೆಗೆ 71 ಜನ ವಿದೇಶದಿಂದ ಹಿಂತಿರುಗಿದ್ದಾರೆ. ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಕ್ವಾರಂಟೈನ್ ಮಾಡಲಾಗಿದೆ. ಸದ್ಯ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ, ಸೋಂಕಿತರೂ ಇಲ್ಲ. ಜನರು ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡದೇ ಮನೆಯಲ್ಲಿಯೇ ಇರಬೇಕು. ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸರ್ಕಾರ ನೀಡಿದ ನಿರ್ದೇಶನದಂತೆ ಕ್ರಮ ವಹಿಸಲಾಗುವುದು.
ಎಂ.ಕೂರ್ಮಾರಾವ್,
ಜಿಲ್ಲಾಧಿಕಾರಿ, ಯಾದಗಿರಿ
ಅನೀಲ ಬಸೂದೆ