ಯಾದಗಿರಿ: ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಜಲಾಶಯ ಬರಿದಾಗಿದ್ದು, ಹಲವಾರು ಗ್ರಾಮಗಳ ರೈತರು ಆತಂಕ ಎದುರಿಸುವಂತಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಅಕ್ಟೋಬರ್ ಎರಡನೇ ವಾರದವರೆಗೆ 739 ಮಿಮೀ ಕನಿಷ್ಠ ಮಳೆಯಲ್ಲಿ 520 ಮಿಮೀ ಮಳೆ ಸುರಿದು ಶೇ. 30ರಷ್ಟು ಕೊರತೆಯಾಗಿದೆ. ಮುಂಗಾರಿನಲ್ಲಿ ಹತ್ತಿಕುಣಿ ಹೋಬಳಿ ವ್ಯಾಪ್ತಿಯಲ್ಲಿ ಶೇ.34 ಮಳೆ ಕೊರತೆಯಾಗಿದ್ದು , ಅಕ್ಟೋಬರ್ ಎರಡನೇ ವಾರದವರೆಗೆ 805 ಕನಿಷ್ಠ ಮಳೆ ಪ್ರಮಾಣದಲ್ಲಿ 560 ಮಿಮೀ ಮಳೆ ಸುರಿದಿದೆ.
Advertisement
ತಾಲೂಕಿನ ಪ್ರಮುಖ ಜಲಾಶಯ 0.352 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ಕಳೆದ ಮೂರು ವರ್ಷಗಳಿಂದಲೂ ಸಕಾಲಕ್ಕೆ ಮಳೆ ಬಾರದೆ ಈ ಭಾಗದ ರೈತರಲ್ಲಿ ನಿರಾಸೆ ಮೂಡಿಸಿದೆ. ಜಲಾಶಯದ ನೀರನ್ನೇ ನಂಬಿರುವ ಹತ್ತಿಕುಣಿ, ಕಟಗಿ ಶಹಾಪುರ, ಯಡ್ಡಳ್ಳಿ, ಹೊನಗೇರಾ ಹಾಗೂ ದಸರಾಬಾದ್ ಗ್ರಾಮಗಳ ಒಟ್ಟು 5,300 ಎಕರೆ ಜಮೀನು ನೀರಾವರಿ ಮಾಡಿಕೊಂಡು ಭತ್ತ, ಜೋಳ, ಶೇಂಗಾ ಬೆಳೆ ಬೆಳೆಯುತ್ತಿದ್ದು, ಮಳೆ ಬಂದರೆ ಮಾತ್ರ ನಿಸರ್ಗದ ನೀರು ಜಲಾಶಯಕ್ಕೆ ಹರಿದು ಬರುತ್ತದೆ. ಪರ್ಯಾಯವಾಗಿ ನೀರು ಪೂರೈಕೆಯಿಲ್ಲದೇ ಇರುವುದು ಕಂಗಾಲಾಗಿಸಿದೆ. ಜಿಲ್ಲೆಯಲ್ಲಿ ಪ್ರವಾಸಿಗರ ಆಕರ್ಷಣಿಯ ಸ್ಥಳವಾಗಿರುವ ಹತ್ತಿಕುಣಿ ಜಲಾಶಯ, ಹಚ್ಚ ಹಸಿರಿನಿಂದ ಕೂಡಿದೆ.