Advertisement

6 ಜಿಲ್ಲೆಗಳ ಅಭಿವೃದ್ಧಿಗೆ ಬದ್ಧ

03:52 PM Sep 18, 2019 | Naveen |

ಯಾದಗಿರಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಐತಿಹಾಸಿಕ ನಿರ್ಧಾರ ತೆಗೆದುಕೊಂಡು ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ಬದಲಾಗಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಆರಂಭಿಸಿದ್ದಾರೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಿತಿ ಹಾಗೂ ಭಾವೈಕ್ಯತಾ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿ ಅಪಾರ ಹಾನಿ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಅತಿವೃಷ್ಟಿ ಕಾರಣ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಗಳಲ್ಲಿ ಪ್ರವಾಹ ಉಂಟಾಗಿ ಹಲವು ಜನ ಆಸ್ತಿ-ಮನೆ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಸರ್ಕಾರಕ್ಕೆ ಹಾನಿ ಸಮೀಕ್ಷೆ ವರದಿ ಸಲ್ಲಿಸಲಾಗಿದ್ದು, ಸೂಕ್ತ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಮ್ಮೊಂದಿಗಿದ್ದು, ರೈತರು ಹಾಗೂ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಪಡಬಾರದು ಎಂದು ಮನವಿ ಮಾಡಿದರು.

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹುದ್ದೆಗಳ ನೇಮಕಾತಿಗೆ ಆದ್ಯತೆ ನೀಡಲಾಗುವುದು. ಈಗಾಗಲೇ 950 ಸ್ಟಾಫ್‌ ನರ್ಸ್‌ ಮತ್ತು ತಜ್ಞವೈದ್ಯರ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸ್ಪತ್ರೆಗಳಲ್ಲಿ ಕೊರತೆ ಇರುವ ವೈದ್ಯಕೀಯ ಉಪಕರಣಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರದ ನೀತಿ ಆಯೋಗ ಆರೋಗ್ಯ, ಶಿಕ್ಷಣ, ಕೃಷಿ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಮಾನದಂಡ ಇಟ್ಟುಕೊಂಡು ದೇಶದಲ್ಲಿ ಗುರುತಿಸಿದ ಹಿಂದುಳಿದ 115 ಜಿಲ್ಲೆಗಳಲ್ಲಿ ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಆಯ್ಕೆಯಾಗಿವೆ. ಎರಡು ಜಿಲ್ಲೆಗಳು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಗಾಗಿ ಅಗತ್ಯವಿರುವ ಸೌಕರ್ಯ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆ ಯಾದಗಿರಿ ಜಿಲ್ಲೆ 2019ರ ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ ಕೃಷಿ ಮತ್ತು ಜಲಸಂಪನ್ಮೂಲದ ಪ್ರಗತಿ ಆಧಾರದ ಮೇಲೆ ದೇಶದಲ್ಲಿ 1ನೇ ಸ್ಥಾನ ಪಡೆದಿರುವುದಕ್ಕಾಗಿ ನೀತಿ ಆಯೋಗದಿಂದ ಜಿಲ್ಲೆಗೆ 3 ಕೋಟಿ ರೂ. ಅನುದಾನ ಬಿಡುಗಡೆ ಆಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

Advertisement

ಮಹತ್ವಾಕಾಂಕ್ಷೆ ಜಿಲ್ಲೆ ಕೆರೆ ಹೂಳೆತ್ತುವ ಯೋಜನೆಯಡಿ ಸಂಘ-ಸಂಸ್ಥೆಗಳು ಮತ್ತು ರೈತರ ಸಹಭಾಗಿತ್ವದಲ್ಲಿ ಜಿಲ್ಲೆಯ 23 ಕೆರೆಗಳ ಹಾಗೂ 1 ನಾಲಾ ಹೂಳೆತ್ತಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚುವ ಜತೆಗೆ ರೈತರಿಗೆ ಫಲವತ್ತಾದ ಮಣ್ಣಿನಿಂದ ಅನುಕೂಲವಾಗಿದೆ. ರೈತರಿಂದ ಹೆಚ್ಚಿನ ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಬಾಕಿ ಕೆರೆಗಳ ಹೂಳೆತ್ತಲು ಕ್ರಮ ತೆಗೆದುಕೊಳ್ಳಲಾಗುವುದು. ಭಾರತೀಯ ಜೈನ ಸಂಘ, ಯಾದಗಿರಿ ಸರಕಾರೇತರ ಸಂಸ್ಥೆ ಸಹಭಾಗಿತ್ವದಲ್ಲಿ ಕೈಗೊಂಡ ಕೆರೆ ಹೂಳೆತ್ತುವ ಯೋಜನೆ ರಾಷ್ಟ್ರಮಟ್ಟದಲ್ಲಿ ಸ್ಕಾಚ್ ಅವಾರ್ಡ್‌ ಫೈನಲ್ನಲ್ಲಿ ಬೆಳ್ಳಿ ಪದಕ ಪಡೆದಿದೆ ಎಂದು ಹೇಳಿದರು.

ಆಡಳಿತದಲ್ಲಿ ಪಾರದರ್ಶಕತೆ ಮತ್ತು ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇ-ಆಫೀಸ್‌ ಹಾಗೂ ಯಾದಗಿರಿ ತಹಶೀಲ್ದಾರ್‌ ಕಚೇರಿಯಲ್ಲಿ ಕರ್ನಾಟಕ ಒನ್‌ ಸೆಂಟರ್‌ಗೆ ಚಾಲನೆ ನೀಡಲಾಗುತ್ತಿದೆ. ಸಮಾಜದ ಪ್ರತಿಯೊಬ್ಬರ ಏಳ್ಗೆಯೇ ಸರ್ಕಾರದ ಧ್ಯೇಯವಾಗಿದೆ. ಸಾರ್ವಜನಿಕರು ಮುಂದೆ ಬಂದು ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜನರ ಮೇಲೆ ಹಿಂಸಾಚಾರ ನಡೆಸುತ್ತಿದ್ದ ನಿಜಾಮರ ಆಡಳಿತಕ್ಕೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದ ಉಕ್ಕಿನ ಮನುಷ್ಯ ಅಂದಿನ ಗೃಹ ಖಾತೆ ಮಂತ್ರಿ ಸರ್ದಾರ್‌ ವಲ್ಲಭಭಾಯ ಪಟೇಲ್ ಅವರು ಆಪರೇಷನ್‌ ಪೋಲೋ ಮಿಲಿಟರಿ ಕಾರ್ಯಾಚರಣೆ ನಡೆಸಿದರು. ಇದರ ಫಲವಾಗಿ 1948ರ ಸೆಪ್ಟೆಂಬರ್‌ 17ರಂದು ನಿಜಾಮರ ಆಳ್ವಿಕೆ ಕೊನೆಗೊಂಡಿತು. ಹೈದರಾಬಾದ್‌ ಕರ್ನಾಟಕ ಭಾಗ ವಿಮೋಚನೆಗೊಂಡು ಅಖಂಡ ಭಾರತದಲ್ಲಿ ಸೇರ್ಪಡೆಯಾಯಿತು. ಮೊದಮೊದಲು ಈ ದಿನವನ್ನು ಕೆಲವು ಸಂಘಟನೆಗಳಷೇr ಆಚರಿಸುತ್ತಿದ್ದವು. 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಈ ಮಹತ್ವದ ದಿನವನ್ನು ಸರಕಾರದ ವತಿಯಿಂದಲೇ ಆಚರಿಸಲು ನಿರ್ಧರಿಸಿದರು. ಅಂದಿನಿಂದ ರಾಜ್ಯದ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡುವ ಪರಂಪರೆ ನಡೆದು ಬಂದಿದೆ. ಇಷ್ಟೆಲ್ಲ ಹೋರಾಟ ನಡೆಸಿದ ಈ ಭಾಗ ಅಭಿವೃದ್ಧಿಯಾಗಿದ್ದು ಅಷ್ಟಕ್ಕಷ್ಟೆ. ಸದ್ಯ ಜಾರಿಯಾಗಿರುವ 371ನೇ ಕಲಂನಿಂದಾದರೂ ಈ ಭಾಗದಲ್ಲಿ ಅಭಿವೃದ್ಧಿಯಾಗಬೇಕಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌, ಜಿಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನವಣೆ, ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಎಸ್‌. ರೊಟ್ನಡಗಿ, ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್‌.ಸೋಮನಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಇದ್ದರು. ಲಿಂಗೇರಿ ಸ್ಟೇಷನ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ತಂಡದವರು ನಾಡಗೀತೆ ಹಾಡಿದರು. ಉಪನ್ಯಾಸಕಿ ಡಾ| ಜ್ಯೋತಿಲತಾ ತಡಿಬಿಡಿಮಠ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next