Advertisement

3.45 ಲಕ್ಷ ಮಕ್ಕಳಿಗೆ ಮಾತ್ರೆ ನುಂಗಿಸುವ ಗುರಿ

12:11 PM Sep 26, 2019 | Team Udayavani |

ಯಾದಗಿರಿ: ಮಕ್ಕಳ ಅಪೌಷ್ಟಿಕತೆ ನಿವಾರಣೆಯಲ್ಲಿ ಜಂತುಹುಳ ನಾಶಕ ಅಲ್ಬೆಂಡ್‌ಜೋಲ್‌ ಮಾತ್ರೆ ತುಂಬಾ ಸಹಕಾರಿಯಾಗಿದೆ. ಪ್ರತಿಯೊಬ್ಬ ಪಾಲಕ-ಪೋಷಕರು ತಮ್ಮ ಮಕ್ಕಳಿಗೆ ಅಲ್ಬೆಂಡ್‌ ಜೋಲ್‌ ಮಾತ್ರೆ ಚೀಪಲು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಮನವಿ ಮಾಡಿದರು.

Advertisement

ನಗರದ ಗಾಂಧಿ  ವೃತ್ತದಲ್ಲಿರುವ ಪಂಪ ಮಹಾಕವಿ ಮಂಟಪದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಸಂಘ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಸೆಪ್ಟೆಂಬರ್‌ 25ರಂದು 1 ವರ್ಷದಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಸರ್ಕಾರಿ ಮತ್ತು ಖಾಸಗಿ ಶಾಲೆ-ಕಾಲೇಜುಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಬಾಕಿ ಉಳಿದ ಮಕ್ಕಳಿಗೆ ಸೆಪ್ಟೆಂಬರ್‌ 30ರ ಮಾಪ್‌ಅಪ್‌ ದಿನದಂದು ಅಲ್ಬೆಂಡ್‌ ಜೋಲ್‌ ಮಾತ್ರೆ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 3,45,254 ಮಕ್ಕಳಿಗೆ ಅಲ್ಬೆಂಡಾಜೋಲ್‌ ಮಾತ್ರೆ ನೀಡುವ ಗುರಿ ಇದೆ. ಜಂತುಹುಳು ನಾಶಕ ಮಾತ್ರೆಯು ಎಲ್ಲಾ ಮಕ್ಕಳಿಗೂ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನದಂದು ಈ ಔಷ ಧಿ ತೆಗೆದುಕೊಳ್ಳಲು ಶಿಫಾರಸು ಮಾಡಿವೆ.

ಅಲ್ಬೆಂಡ್‌ಜೋಲ್‌ ಮಾತ್ರೆ ಚೀಪುವುದರಿಂದ ಮಕ್ಕಳಲ್ಲಿ ರಕ್ತ ಹೀನತೆ ನಿಯಂತ್ರಣ ಮತ್ತು ಪೋಷಕಾಂಶ ಹೀರಿಕೆ ಸುಧಾರಿಸುತ್ತದೆ ಎಂದರು.

Advertisement

ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಭಗವಂತ ಅನವಾರ ಮಾತನಾಡಿ, ಜಂತುಹುಳು ಸೋಂಕಿನಿಂದಾಗಿ ಮಕ್ಕಳು ರಕ್ತ ಹೀನತೆ, ಪೌಷ್ಟಿಕಾಂಶ ಕೊರತೆ, ಹಸಿವಾಗದಿರುವುದು, ನಿಶಕ್ತ ಮತ್ತು ಆತಂಕ, ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ, ತೂಕ ಕಡಿಮೆಯಾಗುವುದು ಸೇರಿದಂತೆ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು. 1-2 ವರ್ಷ ಮಕ್ಕಳಿಗೆ ಅರ್ಧ ಮಾತ್ರೆ (400 ಎಂ.ಜಿ), 2-19 ವರ್ಷದ ಮಕ್ಕಳಿಗೆ 1 ಮಾತ್ರೆ (400 ಎಂ.ಜಿ) ನೀಡಿ ಸರಿಯಾಗಿ ಚೀಪಲು ತಿಳಿಸಬೇಕು. ಯಾವುದೇ ಕಾರಣಕ್ಕೂ ಇದನ್ನು ನುಂಗಬಾರದು. ನುಂಗಿದರೆ ಮಾತ್ರೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಅನಾರೋಗ್ಯ ಪೀಡಿತ ಅಥವಾ ಬೇರೆ ಔಷಧಿ ತೆಗೆದುಕೊಂಡ ಮಕ್ಕಳಿಗೆ ಈ ಜಂತುಹುಳ ನಾಶಕ ಮಾತ್ರೆಗಳನ್ನು
ನೀಡಬಾರದು ಎಂದು ತಿಳಿಸಿದರು.

ಅಲ್ಬೆಂಡ್‌ಜೋಲ್‌ ಮಾತ್ರೆ ಮಕ್ಕಳಿಗೆ ನೀಡುವುದರಿಂದ ದುಂಡು ಹುಳು, ಟೇಪ್‌ ಹುಳು ಮತ್ತು ಕೊಕ್ಕೆ ಹುಳುಗಳನ್ನು ಹೋಗಲಾಡಿಸುವುದಲ್ಲದೆ ಅನೀಮಿಯಾ ಖಾಯಿಲೆ ತಡೆಗಟ್ಟಬಹುದಾಗಿರುತ್ತದೆ. ಪೋಷಕಾಂಶ ಸೇವನೆ ವೃದ್ಧಿಸುತ್ತದೆ. ಏಕಾಗ್ರತೆ, ಕಲಿಕಾ ಸಾಮರ್ಥ್ಯ ಮತ್ತು ಶಾಲೆಯ, ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಈ ಮೂಲಕ ಮಕ್ಕಳು ಮಾನಸಿಕ ಮತ್ತು ಶಾರೀರಿಕವಾಗಿ ಸದೃಢರಾಗಿರುತ್ತಾರೆ ಎಂದು ಹೇಳಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ| ಸೂರ್ಯಪ್ರಕಾಶ ಎಂ. ಕಂದಕೂರ ಮಾತನಾಡಿ, ಶೌಚಾಲಯ ಬಳಕೆ ಮಾಡದಿರುವುದರಿಂದ ಮಕ್ಕಳಲ್ಲಿ ಹೆಚ್ಚಾಗಿ ಜಂತುಹುಳು ಕಂಡು ಬರುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಶೌಚಾಲಯ ಬಳಸಬೇಕು. ಶೌಚದ ಬಳಿಕ ಕೈಗಳನ್ನು  ಬೂನಿನಿಂದ
ತೊಳೆದುಕೊಳ್ಳಬೇಕು. ಮನೆ ಸುತ್ತಲು ನೈರ್ಮಲ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.

ಅಲ್ಬೆಂಡ್‌ಜೋಲ್‌ ಮಾತ್ರೆ ತೆಗೆದುಕೊಂಡ ನಂತರ ಮಕ್ಕಳಲ್ಲಿ ಕೆಲವೊಮ್ಮೆ ವಾಕರಿಕೆ, ಸೌಮ್ಯ ಹೊಟ್ಟೆ ನೋವು, ವಾಂತಿಯಾಗುವುದು, ಅತಿಸಾರ ಹಾಗೂ ಬಳಲಿಕೆ ಕಂಡು ಬರಬಹುದು. ಅವರು ಜಂತುಹುಳುಗಳನ್ನು ಹೊಂದಿದ್ದಲ್ಲಿ ಇವುಗಳನ್ನು ನಿರೀಕ್ಷಿಸಬಹುದು. ಆದರೆ, ಯಾವುದೇ ಗಾಬರಿಯಾಗಬೇಡಿ. ಯಾವುದೇ ವೈದ್ಯಕೀಯ ನೆರವಿಗಾಗಿ ಉಚಿತ ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ. ಹೆಚ್ಚಿನ ಮಾಹಿತಿಗಾಗಿ ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಂಪರ್ಕಿಸಲು ಕೋರಿದರು. ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ ಪಾಟೀಲ ಮಕ್ಕಳಿಗೆ ಅಲ್ಬೆಂಡ್‌ಜೋಲ್‌ ಮಾತ್ರೆ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದ ರಾಷ್ಟ್ರೀಯ ವ್ಯವಸ್ಥಾಪಕ ರನಪಾಲ್‌ ಸಿಂಗ್‌ ಮಾತನಾಡಿದರು. ಸಿಪಿಐ ಶರಣಗೌಡ, ಡಾ| ಹಣಮಂತರೆಡ್ಡಿ, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಬಿರಾದಾರ ಶಂಕರ ನಿರೂಪಿಸಿದರು. ಹಿರಿಯ ಆರೋಗ್ಯ ಸಹಾಯಕ ಪರಮರೆಡ್ಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next