ಯಾದಗಿರಿ: ಉಳ್ಳಾಗಡ್ಡಿ ಇಷ್ಟು ದಿನ ಮಹಿಳೆಯರಿಗೆ ಮಾತ್ರ ಕಣ್ಣೀರು ತರಿಸುತ್ತಿತ್ತು. ಈಗ ಖರೀದಿಸುವವರಿಗೂ ಕಣ್ಣೀರು ತರಿಸುವಂತಾಗಿದೆ. ನಿತ್ಯ ಅಡುಗೆಗೆ ಉಪಯೋಗಿಸಲಾಗುವ ಉಳ್ಳಾಗಡ್ಡಿ ಬೆಲೆ ಒಂದು ಕೆಜಿಗೆ ಕಿರುಕುಳ ಮಾರುಕಟ್ಟೆಯಲ್ಲಿ 80 ರೂ. ಕಳೆದ ಒಂದು ವಾರದ ಹಿಂದೆ 50 ರೂ. ಇದ್ದ ಉಳ್ಳಾಗಡ್ಡಿ ವಾರದಲ್ಲಿಯೇ 30 ರೂ. ಏರಿಕೆಯಾಗಿ ಗೃಹಿಣಿಯರಿಗೆ ಶಾಕ್ ನೀಡಿದೆ.
Advertisement
ಪ್ರತಿ ಮನೆಯಲ್ಲಿಯೂ ಎಲ್ಲ ಆಹಾರ ಪದಾರ್ಥಕ್ಕೆ ಉಳ್ಳಾಗಡ್ಡಿ ಬೇಕೆ ಬೇಕು. ಅಂತಹದ್ದರಲ್ಲಿ ಬೆಲೆ ಗಗನಕ್ಕೇರಿದ್ದು. ಬಳಕೆ ನಿಲ್ಲುಸುವ ಪರಿಸ್ಥಿತಿ ತಂದೊಡ್ಡಿದೆ. ತರಕಾರಿಗಳಿಗಿಂತಲೂ ಉಳ್ಳಾಗಡ್ಡಿ ಬಲು ದುಬಾರಿಯಾಗಿದ್ದು ಅಡುಗೆ ರುಚಿ ಕಳೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಮುಂಗಾರಿನಲ್ಲಿ 89 ಹೆಕ್ಟೇರ್ ಉಳ್ಳಾಗಡ್ಡಿ ಬಿತ್ತನೆ ಗುರಿಯಲ್ಲಿ ರೈತರು 81 ಹೆಕ್ಟೇರ್ ಬಿತ್ತನೆ ಮಾಡಿದ್ದಾರೆ. ಹಿಂಗಾರಿನಲ್ಲಿ ಈಗಷ್ಟೇ ಬಿತ್ತನೆ ಆರಂಭವಾಗುತ್ತಿದೆ. ಮಳೆಗಾಲದಲ್ಲಿ ಬೆಳೆದ ಕೆಂಪು ಉಳ್ಳಾಗಡ್ಡಿಯೂ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಇದು ಹೆಚ್ಚು ದಿನ ಉಳಿಯದೇ ಬೇಗ ಕೊಳೆಯುವುದರಿಂದ ಇದನ್ನು ಖರೀದಿಸಲು ಜನ ಹಿಂಜರಿಯುತ್ತಿದ್ದು ತಾತ್ಕಾಲಿಕವಾಗಿ ಬೇಕಿರುವಷ್ಟು ಮಾತ್ರ ಖರೀದಿಸುತ್ತಿರುವುದು ಕಂಡು ಬರುತ್ತಿದೆ.