Advertisement

ಪ್ರತಿಯೊಬ್ಬರು ಪ್ರಾಮಾಣಿಕತೆ ರೂಢಿಸಿಕೊಳ್ಳಲಿ: ಸ್ವಾಮೀಜಿ

12:17 PM Sep 08, 2019 | Team Udayavani |

ಯಾದಗಿರಿ: ತಾನು ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ ಇದ್ದರೆ ಅದು ನಿಜವಾದ ಗುರುವಂದನೆ ಎನ್ನಿಸಿಕೊಳ್ಳುತ್ತದೆ ಎಂದು ಪೂಜ್ಯ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

Advertisement

ನಗರದ ದಯಾನಂದ ಪ್ರಾಥಮಿಕ ಶಾಲೆ 1989-90ನೇ ಸಾಲಿನ ವಿದ್ಯಾರ್ಥಿಗಳು ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗುರುಗಳಿಗೆ ಸಲ್ಲಿಸುವ ವಂದನೆ ಎಂದರೆ ಅದು ಅವರು ಕಲಿಸಿದ ವಿದ್ಯೆಯನ್ನು ಸಮಾಜಕ್ಕೆ ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ವಿದ್ಯಾರ್ಥಿಗಳು ಸೇರಿ ಗುರುವಂದನೆ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದ ಎಲ್ಲ ಹಳೆಯ ಮಿತ್ರರು, ಗುರು ಶಿಷ್ಯರು ಒಗ್ಗೂಡಿ ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಂಡು ಬದುಕಿನ ಯಶಸ್ಸನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನಡೆಸಿರುವುದು ಮಾದರಿಯಾಗಿದೆ ಎಂದರು.

ನಿವೃತ್ತ ಶಿಕ್ಷಕ ಕೊಟ್ಟುರೇಶ್ವರ ಹಿರೇಮಠ ಮಾತನಾಡಿ, ದಯಾನಂದ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ವಿವಿಧ ಹುದ್ದೆಗಳು ಅಲಂಕರಿಸಿ ಶಿಕ್ಷಕರ ದಿನಾಚರಣೆ ನಿಮಿತ್ತ ಗುರುವಂದನೆ ಕಾರ್ಯಕ್ರಮ ಆಯೋಜಿಸಿ ಕಲಿಸಿದ ಗುರುಗಳಿಗೆ ನಿಜಗೌರವ ಸಲ್ಲಿಸಿರುವುದು ಸಂತಸ ತಂದಿದೆ. ಆದರೆ ನಿಮ್ಮ ನಿಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆಯಿಂದ ನಾಲ್ಕು ಜನರಿಗೆ ಒಳ್ಳೆಯದು ಮಾಡಿ ನ್ಯಾಯ ಒದಗಿಸಿದರೆ ಅದು ಕಲಿಸಿದ ಗುರುಗಳಿಗೆ ಕೊಡುವ ನಿಜವಂದನೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಸಿದ್ದಪ್ಪ ಹೊಟ್ಟಿ ಮಾತನಾಡಿ, ನಗರದಲ್ಲಿ 1989ರ ಸುಮಾರಿಗೆ ಇದ್ದ ಕೇವಲ 3 ಶಾಲೆಗಳ ಪೈಕಿ ಸರ್ಕಾರಿ ಪಾಠಶಾಲೆ, ಎಂಆರ್‌ಎಂ ಶಾಲೆ ಹಾಗೂ ದಯಾನಂದ ಶಾಲೆಗಳೇ ನಗರದ ಶಿಕ್ಷಣ ಕೇಂದ್ರವಾಗಿದ್ದವು. ಇಲ್ಲಿ ಓದಿದವರೆಲ್ಲರೂ ಇಂದು ನಾಡಿನಾದ್ಯಂತ ಬೆಳೆದು ನಿಂತಿರುವುದು ಶಾಲೆಯ ಹೆಮ್ಮೆ ಎಂದರು.

Advertisement

ನಿವೃತ್ತ ಶಿಕ್ಷಕ ಅಯ್ಯಣ್ಣ ಹುಂಡೇಕಾರ್‌ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಾದ ಗೌರಾದೇವಿ ಲದ್ದಿ, ಸಂಗಮೇಶ ದೇಸಾಯಿ, ಮಹೇಶ ಚಂದನಕರ್‌ ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರುಗಳಿಗೆ ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು.

ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಓಂಪ್ರಕಾಶ ಬಟ್ಟಡ ವಹಿಸಿದ್ದರು. ಅತಿಥಿಗಳಾಗಿ ಬಿಆರ್‌.ಪಿ. ಬಂದಪ್ಪ ಐರೆಡ್ಡಿ, ಸಿಆರ್‌ಪಿ. ರವಿಚಂದ್ರ ನಾಯ್ಕಲ್, ಶಾಲೆಯ ಮುಖ್ಯ ಗುರು ಬಸವರಾಜ ಅಥರ್ಗಾ, ನಿವೃತ್ತ ಶಿಕ್ಷಕ ರಾಚಣ್ಣ ಶಹಾಪುರಕರ್‌, ತಿಪ್ಪಣ್ಣ ಹೂಗಾರ, ಲಿಂಗಣ್ಣ ಕಟ್ಟಿಮನಿ, ಮಲ್ಲಯ್ಯ ಮಗ್ಗಾ, ಶಿಕ್ಷಕರಾದ ಮಹಾದೇವಪ್ಪ ಅಂಬಿಗೇರ, ಗೀತಾ ದೊಡ್ಡಮನಿ, ಶಿವಶರಣ್ಪ ಕುಕನೂರ, ಬಸಪ್ಪ ಬಾಗೇವಾಡಿ, ಜ್ಯೋತಿ ಶೀಲವಂತ ಇದ್ದರು.

ಗೀತಾ ಜೋಶಿ ಪ್ರಾರ್ಥಿಸಿದರು. ಶರಣಗೌಡ ಅಲ್ಲಿಪುರ ಸ್ವಾಗತಿಸಿದರು. ಶಿವಶರಣ ಮಡಿವಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next