Advertisement

ಕಾರ್ಮಿಕರಿಗೆ ಹೆಚ್ಚಿನ ಸೌಕರ್ಯ ಕಲ್ಪಿಸುವುದು ಅಗತ್ಯ

06:28 PM Mar 13, 2020 | Naveen |

ಯಾದಗಿರಿ: ಕಾರ್ಮಿಕರಿಗೆ ಸರ್ಕಾರ ಈಗಾಗಲೇ ಪ್ರೋತ್ಸಾಹ ನೀಡುತ್ತಿದೆ. ಹೆಚ್ಚಿನ ಸೌಕರ್ಯ ನೀಡಿ ಕಾರ್ಮಿಕರು ಸಹ ಎಲ್ಲ ಕ್ಷೇತ್ರಗಳಲ್ಲಿ ಸದೃಢರಾಗಲು ಸರ್ಕಾರ ಅಗತ್ಯ ಯೋಜನೆ ರೂಪಿಸಬೇಕು ಎಂದು ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಂಯುಕ್ತಾಶ್ರಯದಲ್ಲಿ ಕಾರ್ಮಿಕ ಸಮ್ಮಾನ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ಅಸಂಘಟಿತ ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕಾಯಕ ನಂಬಿ ಜೀವನ ನಡೆಸುವ ಜೀವಿಗಳ ಯೋಗಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಮಾಲೀಕ, ಗುತ್ತೇದಾರ ಎನ್ನುವ ಮನೋಭಾವ ಹೆಚ್ಚಾಗುತ್ತಿದೆ. ಗುತ್ತಿಗೆದಾರ, ಕೈಗಾರಿಕೆಗಳ ಮಾಲೀಕ ಎನಿಸಿಕೊಳ್ಳಲು ಕಾರ್ಮಿಕರೇ ಕಾರಣ. ಭವ್ಯ ಕಟ್ಟಡಗಳಲ್ಲಿ ನಾವು ಕುಳಿತುಕೊಳ್ಳುತ್ತಿದ್ದೇವೆ ಎಂದರೆ ಅದು ಕಾರ್ಮಿಕರ ಪರಿಶ್ರಮದಿಂದ ಮಾತ್ರ ಸಾಧ್ಯವಾಗಿದೆ. ಕಾರ್ಮಿಕರಿಲ್ಲದೆ ಮಾಲೀಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ಅಸಂಘಟಿತ ಕಾರ್ಮಿಕರ ಪ್ರತಿಭೆ ಗುರುತಿಸಿ ಅವರಿಗೆ ಶ್ರಮ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ತಮ್ಮ ತಲಾತಲಾಂತರಿಂದ ಕಲಿತುಕೊಂಡು ಬಂದ ಕೌಶಲ್ಯಕ್ಕೆ ಇಲಾಖೆ ವತಿಯಿಂದ ಪ್ರೋತ್ಸಾಹ ಮತ್ತು ತರಬೇತಿಯಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ -ಧನ್‌ (ಪಿಎಂಎಸ್‌ವೈಎಂ) ಯೋಜನೆಯಡಿ ಅಸಂಘಟಿತ ಕಾರ್ಮಿಕರು ಸಂಧ್ಯಾಕಾಲದಲ್ಲಿ ದುಡಿದು ಜೀವನ ನಡೆಸುವುದು ಕಷ್ಟಸಾಧ್ಯ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಪಿಂಚಣಿ ಯೋಜನೆ ನೆರವಾಗಲಿದೆ. ಪ್ರತಿಯೊಬ್ಬ ಕಾರ್ಮಿಕರು ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಅಸಂಘಟಿತ ಕಾರ್ಮಿಕರು ಬ್ಯಾಂಕ್‌ಗಳು, ಸಂಘ- ಸಂಸ್ಥೆಗಳಿಂದ ಹಾಗೂ ಕಾರ್ಮಿಕ ಇಲಾಖೆಯಿಂದ ಸಹಕಾರ ಪಡೆದುಕೊಂಡು ಪ್ರಗತಿ ಹೊಂದಬೇಕು. ಪ್ರಸ್ತುತ ದಿನಮಾನಗಳಲ್ಲಿ ತಂತ್ರಜ್ಞಾನ ಮುಂದುವರಿದಿದೆ. ಕಾರ್ಮಿಕರು ಕೆಲಸದಲ್ಲಿನ ವಿವಿಧ ಕೌಶಲಗಳ ಬಗ್ಗೆ ತರಬೇತಿ ಪಡೆದು ಕಾರ್ಯನಿರ್ವಹಿಸಿದರೆ ಒಳಿತು ಎಂದು ಹೇಳಿದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರ್‌ಸಿಂಗ್‌ ಠಾಕೂರ್‌ ಮಾತನಾಡಿ, ರಾಜ್ಯ ಸರ್ಕಾರ 43 ವಲಯಗಳ ಅಸಂಘಟಿತ ಕಾರ್ಮಿಕರನ್ನು ಗುರುತಿಸಿದೆ. 2017-18ನೇ ಸಾಲಿನಲ್ಲಿ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಅನುಷ್ಠಾನಗೊಳಿಸಿದೆ. ಅಸಂಘಟಿತ ವಲಯಗಳಾದ ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೈಲರ್ಸ್‌ ಹಾಗೂ ಮೆಕ್ಯಾನಿಕ್‌ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತಿದೆ ಎಂದು ಹೇಳಿದರು.

ಅಸಂಘಟಿತ ಕಾರ್ಮಿಕರ ವೃತ್ತಿ ಹಾಗೂ ಪ್ರತಿಭೆ ಗುರುತಿಸಿ ಪ್ರಶಸ್ತಿ ಪುರಸ್ಕಾರ ನೀಡುವುದರ ಜತೆಗೆ ಅವರ ಸವಲತ್ತುಗಳಿಗಾಗಿ ಕಾರ್ಮಿಕ ಇಲಾಖೆ ಶ್ರಮಿಸುತ್ತಿದೆ. ಅಲ್ಲದೇ ಕಾರ್ಮಿಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳಿಸುವ ಬದಲು ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.

ಇದೇ ವೇಳೆ ಗೃಹ ಕಾರ್ಮಿಕರು, ಟೈಲರಿಂಗ್‌, ಕ್ಷೌರಿಕರು, ಕುಂಬಾರರು, ಅಗಸರು, ಮಂಡಕ್ಕಿ ಭಟ್ಟಿ ಹಾಗೂ ಹಮಾಲಿಗಳು ಸೇರಿದಂತೆ ವಿವಿಧ ಅಸಂಘಟಿತ ಕಾರ್ಮಿಕರಿಗೆ ಪ್ರಥಮ ಪ್ರಶಸ್ತಿ 15 ಸಾವಿರ ರೂ. ಮೌಲ್ಯದ ಚಿನ್ನದ ಪದಕ ಜತೆಗೆ ಪ್ರಶಂಸಾ ಪತ್ರ, ದ್ವಿತೀಯ ಪ್ರಶಸ್ತಿ 10 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕ, ಪ್ರಶಂಸಾ ಪತ್ರ ಹಾಗೂ ತೃತೀಯ ಪ್ರಶಸ್ತಿ 8 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕ, ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಹರಿ, ಯಾದಗಿರಿ ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ ಸೇರಿದಂತೆ ಕಾರ್ಮಿಕ ಇಲಾಖೆ ಸಿಬ್ಬಂದಿ ಇದ್ದರು. ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ತಂಡದವರು ನಾಡಗೀತೆ ಹಾಡಿದರು. ಉಪನ್ಯಾಸಕಿ ಡಾ| ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next