Advertisement

ಅಂಗನವಾಡಿ ಕೇಂದ್ರಗಳಿಗೆ ಶುದ್ಧ ನೀರು ಕಲ್ಪಿಸಿ

11:01 AM Jul 21, 2019 | Naveen |

ಯಾದಗಿರಿ: ಜಿಲ್ಲೆಯ ವಿವಿಧ ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡಿ ಹಾಗೂ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಸಾರ್ವಜನಿಕರಿಗೆ ಪಡಿತರ ವಿತರಿಸುತ್ತಿರುವುದು ಕಂಡು ಬಂದಿದ್ದು, ಅಂತಹ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ| ಎನ್‌. ಕೃಷ್ಣಮೂರ್ತಿ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಷ್ಠಾನ ಕುರಿತಂತೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ತಂಡ ಜಿಲ್ಲೆಯಲ್ಲಿ ಮೂರು ದಿನ ಪ್ರವಾಸ ಕೈಗೊಂಡು ಅಂಗನವಾಡಿ ಕೇಂದ್ರ, ಎಂಎಸ್‌ಪಿಟಿಸಿ, ಮಧ್ಯಾಹ್ನ ಉಪಾಹಾರ ಯೋಜನೆ, ಆಹಾರ ಧಾನ್ಯ ಸಗಟು ಮಳಿಗೆ, ನ್ಯಾಯಬೆಲೆ ಅಂಗಡಿ, ಜಿಲ್ಲಾ ತೀವ್ರ ಅಪೌಷ್ಟಿಕ ಮಕ್ಕಳ ಉಪಚಾರ ಘಟಕ, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಈ ವೇಳೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಘಟಕಕ್ಕೆ 1ರಿಂದ 2 ಕೆ.ಜಿ. ಕಡಿಮೆ ಪ್ರಮಾಣದ ಧಾನ್ಯ ವಿತರಣೆ ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಡಿಜಿಟಲ್ ತೂಕದ ಯಂತ್ರ ಅಳವಡಿಸಬೇಕು. ಅಲ್ಲದೇ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಪಡಿತರ ಚೀಟಿಗಳಿಗೆ ನೀಡುವ ಉಚಿತ ಅಕ್ಕಿ ಪ್ರಮಾಣ ಹಾಗೂ ನಿಯಮಾನುಸಾರ ವಿತರಿಸುವ ಬೇಳೆ, ಇನ್ನಿತರ ಧಾನ್ಯ, ಸೀಮೆ ಎಣ್ಣೆಯ ನಿಗದಿತ ದರದ ಫಲಕ ಅಳವಡಿಸಬೇಕು. ಪಡಿತರ ವಿತರಣೆ ಬಗ್ಗೆ ದೂರುಗಳಿದ್ದಲ್ಲಿ ಸಾರ್ವಜನಿಕರು ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು ಮತ್ತು ಅವರ ದೂರವಾಣಿ ಹಾಗೂ ಸಹಾಯವಾಣಿ- 1967 ಸಂಖ್ಯೆಯನ್ನೊಳಗೊಂಡ ಮಾಹಿತಿ ಫಲಕದಲ್ಲಿರಬೇಕು. ನ್ಯಾಯಬೆಲೆ ಅಂಗಡಿ ಮಟ್ಟದ ಜಾಗೃತಿ ಸಮಿತಿ ಸದಸ್ಯರ ಹೆಸರು ಮತ್ತು ಮೊಬೈಲ್ ಸಂಖ್ಯೆಗಳ ಮಾಹಿತಿ ಕೂಡ ಪ್ರದರ್ಶಿಸಲು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ಅಂಗನವಾಡಿಗಳಲ್ಲಿ ಸರಿಯಾಗಿ ರಿಜಿಸ್ಟರ್‌ಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಕೆಲವೊಂದು ಅಂಗನವಾಡಿಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿವೆ. ಉದಾಹರಣೆಗೆ ಬಿಜಾಸ್ಪೂರ ಹರಿಜನ ಕಾಲೋನಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮುನಿರಾ ಬೇಗಂ ಅವರು ಮಕ್ಕಳಿಗೆ ಚೆನ್ನಾಗಿ ಕಲಿಸುವುದು, ಗರ್ಭಿಣಿಯರು ಮತ್ತು ತಾಯಂದಿರ ಸಭೆ ನಡೆಸಿರುವುದು ಕಂಡು ಬಂತು. ಈ ಬಗ್ಗೆ ರಿಜಿಸ್ಟರ್‌ ಕೂಡ ನಿರ್ವಹಣೆ ಮಾಡುತ್ತಿದ್ದಾರೆ. ಇನ್ನು ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ಕಲ್ಪಿಸುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.

Advertisement

ಅಂಗನವಾಡಿಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಯುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ತಪಾಸಣೆ ನಡೆಸುವ ವೈದ್ಯರ ವಾಹನಗಳಿಗೆ ಜಿಪಿಎಸ್‌ ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ವಿಧಾನ ಸಫಲವಾದರೆ ಬೇರೆ ಜಿಲ್ಲೆಗಳಲ್ಲಿಯೂ ಅನುಸರಿಸಲು ಶಿಫಾರಸು ಮಾಡಲಾಗುವುದು. ಇನ್ನು ಮಧ್ಯಾಹ್ನ ಉಪಾಹಾರ ಯೋಜನೆಯಡಿ ಎತ್ತುವಳಿ ಮಾಡಿದಷ್ಟು ಬೇಳೆ ಮತ್ತು ಅಕ್ಕಿಯನ್ನು ಬಳಕೆ ಮಾಡದೆ ಕಡಿಮೆ ಪ್ರಮಾಣದ ಆಹಾರ ಧಾನ್ಯದಿಂದ ಅಡುಗೆ ಮಾಡಲಾಗುತ್ತಿದೆ. ಈ ವ್ಯವಸ್ಥೆ ಬದಲಾವಣೆ ಆಗಬೇಕು ಎಂದು ಸಲಹೆ ನೀಡಿದರು.

ರಾಮಸಮುದ್ರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 200 ಹೆಣ್ಣು ಮಕ್ಕಳಿದ್ದು, ಮೂಲ ಸೌಕರ್ಯದ ಕೊರತೆ ಇದೆ. ಎರಡೇ ಶೌಚಾಲಯಗಳು ಇರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಒಂದು ಕೋಣೆಯಲ್ಲಿ 30 ವಿದ್ಯಾರ್ಥಿನಿಯರು ವಾಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಾವ ಜಿಲ್ಲೆಯಲ್ಲಿಯೂ ಕಂಡು ಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ವಿ.ಬಿ. ಪಾಟೀಲ, ಎಚ್.ವಿ. ಶಿವಶಂಕರ, ಡಿ.ಜಿ. ಹಸಬಿ, ಬಿ.ಎ. ಮಹಮ್ಮದ್‌ ಆಲಿ, ಮಂಜುಳಾಬಾಯಿ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ದತ್ತಪ್ಪ ಕಲ್ಲೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next