Advertisement

ಶೀಘ್ರ ಮಾಹಿತಿಗೆ ಗ್ರಂಥಾಲಯಗಳಲ್ಲಿ ಡಿಜಿಟಲ್‌ ಸೌಕರ್ಯ

05:14 PM Feb 13, 2020 | Naveen |

ಯಾದಗಿರಿ: ಓದುಗರಿಗೆ ಶೀಘ್ರ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಗ್ರಂಥಾಲಯಗಳಲ್ಲಿ ಡಿಜಿಟಲ್‌ ಸೌಕರ್ಯ ಒದಗಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ ಹೇಳಿದರು.

Advertisement

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ ಇಲಾಖೆಯಿಂದ ಜಿಲ್ಲೆಗೆ ಸರಬರಾಜು ಆಗಿರುವ ಕಂಪ್ಯೂಟರ್‌, ಟ್ಯಾಬ್‌ ವೀಕ್ಷಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಓದುಗರ ಬೇಡಿಕೆಗೆ ತಕ್ಕಂತೆ ಮುನ್ನುಗ್ಗುವ ಅಗತ್ಯತೆ ಮನಗಂಡು ಡಿಜಿಟಲ್‌ ಗ್ರಂಥಾಲಯ ಸೇವೆಯನ್ನು ರಾಜ್ಯದ 30 ಜಿಲ್ಲಾ ಕೇಂದ್ರ, ನಗರ ಕೇಂದ್ರ ಹಾಗೂ ತಾಲೂಕು ಮಟ್ಟದ ಶಾಖಾ ಗ್ರಂಥಾಲಯಗಳಲ್ಲಿ ಒದಗಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ 6 ತಾಲೂಕು ಗ್ರಂಥಾಲಯಗಳು ಸೇರಿದಂತೆ ನಗರದಲ್ಲಿರುವ ಗ್ರಂಥಾಲಯಗಳಿಗೆ ಕಂಪ್ಯೂಟರ್‌ ಹಾಗೂ ಟ್ಯಾಬ್‌ ಅಳವಡಿಸಲಾಗಿದೆ. ಜತೆಗೆ ಮೊದಲ ಮಹಡಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರವೇ ಲೋಕಾರ್ಪಣೆ ಮಾಡುವಂತೆ ಮುಖ್ಯ ಗ್ರಂಥಾಲಯ ಅಧಿಕಾರಿ ಎಂ.ಎಸ್‌. ರಬಿನಾಳ ಅವರಿಗೆ ಸೂಚಿಸಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ನಂತರ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂಬ ಮಾಹಿತಿ ನೀಡುವ ಕರಿಯರ್‌ ಗೈಡ್‌ ಗಳನ್ನು ಗ್ರಂಥಾಲಯಕ್ಕೆ ಸರಬರಾಜು ಮಾಡುವಂತೆ ಸೂಚಿಸಿದರು.

ಕೆಕೆಆರ್‌ಡಿಬಿಯಿಂದ ಪ್ರಾಯೋಗಿಕವಾಗಿ ಜಿಲ್ಲೆಯ 15 ಗ್ರಾಪಂ ಗ್ರಂಥಾಲಯಗಳಲ್ಲಿ ಕಿಯೋಸ್ಕ್ ಅಂತರ್ಜಾಲ ಸಂಪರ್ಕ ಸೇವೆ ಕಲ್ಪಿಸಲಾಗಿದೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ನಲಿನ್‌ ಅತುಲ್‌ ಮಾಹಿತಿ ನೀಡಿದರು.

Advertisement

ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಾದಗಿರಿ ನಗರದಲ್ಲಿ 1.70 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್‌ ಗ್ರಂಥಾಲಯ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮರಾವ್‌ ಎಂ. ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ 88 ಗ್ರಾಪಂಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಾಕಿ ಉಳಿದ ಗ್ರಾಪಂಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.

ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಎಸ್‌. ರಬಿನಾಳ, ಗ್ರಂಥಪಾಲಕ ಪರಮೇಶ್ವರ ಮದರಗಿ, ಎಫ್‌ಡಿಎ ಎಂ.ಎನ್‌. ಪಟೇಲ್‌, ಗೌತಮ ಕಡೂನ್‌, ಗ್ರಂಥಾಲಯ ಸಹಾಯಕ ಪಾಟೀಲ ಬಸನಗೌಡ, ನಿಂಗಮ್ಮ ಸಜ್ಜನ, ಕಾಸಿಂ ರೊಟ್ನಡಗಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next