Advertisement

Yadagiri: ಜಯ ಘೋಷಗಳೊಂದಿಗೆ ಭಂಡಾರದಲ್ಲಿ ಮಿಂದೆದ್ದ ಮಲ್ಲಯ್ಯನ ಭಕ್ತರು

06:53 PM Jan 14, 2024 | Team Udayavani |

ಯಾದಗಿರಿ: ಬಾನು, ಭುವಿ ಹಳದಿ ಬಣ್ಣಕ್ಕೆ ತಿರುಗಿರುವ ಹಾಗೇ ಕಂಗೊಳಿಸುತ್ತಿತ್ತು, ಎಲ್ಲೆಡೆ ಭಂಡಾರದ ಓಕುಳಿ ನಲಿದಾಡುತ್ತಿತ್ತು, ಭಕ್ತರ ಹರ್ಷೋದ್ಘಾರ ಮೈಲಾಪುರ ಗ್ರಾಮದಲ್ಲಿ ಮೇಳೈಸಿತ್ತಿತ್ತು, ಸಿಹಿ ತಿನಿಸು, ಕಬ್ಬು, ಬಾಳೆ, ಎಳ್ಳು ಬೆಲ್ಲ ಜತೆಗೆ ಮಲ್ಲಯ್ಯನಿಗೆ ಅರ್ಪಿಸಲು ಕುರಿ ಉಣ್ಣೆ ಹೀಗೆ ಸಡಗರ ಕಂಡು ಬಂದದ್ದು ಯಾದಗಿರಿಯ ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ.

Advertisement

ತಾಲೂಕಿನ ಮೈಲಾಪುರದಲ್ಲಿ ಸಂಕ್ರಮಣ ದಿನದಂದು ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಅದ್ದೂರಿಯಾಗಿ ಪಲ್ಲಕ್ಕಿ ಮೆರವಣಿಗೆ ಹಾಗೂ ಜಾತ್ರಾ ಮಹೋತ್ಸವ ಜರುಗಿತು.

ಕುರಿ ಮರಿಗಳ ಎಸೆತವನ್ನು ತಪ್ಪಿಸುಲು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಹಾಗೂ ಜತೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು, ಇದೆಲ್ಲದರ ನಡುವೆ ಮೈಲಾಪುರ ಜಾತ್ರೆ ನಡೆಯಿತು.

ಕಲ್ಯಾಣ ನಾಡಿನಲ್ಲಿಯೇ ಹೆಸರುವಾಸಿಯಾಗಿರುವ ಮೈಲಾರಪುರ ಜಾತ್ರಾ ಮಹೋತ್ಸವದಲ್ಲಿ ರವಿವಾರ ಬೆಳಗ್ಗೆ 12.25ಕ್ಕೆ ಪಲ್ಲಕ್ಕಿ ಮೆರವಣಿಗೆ ಜರುಗಿತು. ಏಳು ಕೋಟಿ ಕೋಟಿಗೆ ಎಂದು ಜೈ ಘೋಷಗಳ ನಡುವೆ ಬೆಟ್ಟದಿಂದ ಇಳಿದು ಬಂದ ಮಲ್ಲಯ್ಯನ ಕುದರೆ ಹಾಗೂ ಭಕ್ತರ ದಂಡು ನೇರವಾಗಿ ಹೊನ್ನಕೆರೆಗೆ ತೆರಳಿ ಮಲ್ಲಯ್ಯನ ಸ್ನಾನ ಮಾಡಿಸುವ ಸಂಪ್ರಾಯವನ್ನು ಮಾಡಿದರು.

ಹೊನ್ನಕೆರೆಯಲ್ಲಿ ಮಲ್ಲಯ್ಯನ ಮೂರ್ತಿಗೆ ಮತ್ತು ಆತನ ಕುದುರೆಗೆ ಭಕ್ತರು ಎಳ್ಳು-ಬೆಲ್ಲಾ ಹಚ್ಚಿ ಗಂಗಾಸ್ನಾನ ಮಾಡಿಸಿದ ನಂತರ ಪಲ್ಲಕ್ಕಿ ಮರಳಿ ದೇವಸ್ಥಾನ ಮೆಟ್ಟಿಲು ಹತ್ತಿರ ಬರುತ್ತಿದಂತೆಯೇ ಮುಖ್ಯದ್ವಾರದಲ್ಲಿರುವ ಹಾಲಗಂಬಕ್ಕೆ ಕಟ್ಟಿರುವ ಕಬ್ಬಿಣದ ಸರಪಳಿಯನ್ನು ವಗ್ಗರು ಹರಿಯುವುದನ್ನು ನೋಡಲು ಜನಸಾಗರವೇ ಸೇರಿತು. ಪೊಲೀಸರ ಕಣ್ಗಾವಲಿನಲ್ಲಿ ಬೆಟ್ಟದ ಮೇಲೆ ಇರುವ ಗುಹಾಂತರ ದೇವಾಲಯಕ್ಕೆ ಪಲ್ಲಕ್ಕಿಯನ್ನು ತೆಗೆದುಕೊಂಡು ಹೋಗಿ ಮೂಲ ಸ್ಥಳದಲ್ಲಿ ಅರ್ಚಕರಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಮಾಡಿದರು.

Advertisement

ಏಳು ಕೋಟಿ ಕೋಟಿಗೆ..
ಭಕ್ತರು ಭಂಡಾರ, ಹಣ ಹಾಗೂ ರೈತಾಪಿ ವರ್ಗ ತಮ್ಮ ಜಮೀನಿನಲ್ಲಿ ಬೆಳೆದ ಜೋಳ, ಶೇಂಗಾ ಹಾಗೂ ಇನ್ನೀತರ ಪದಾರ್ಥಗಳನ್ನು ಶ್ರದ್ದೆ ಭಕ್ತಿಯಿಂದ “ಶಿವ ಏಳು ಕೋಟಿ ಕೋಟಿಗೆ” “ಮೈಲಾರಲಿಂಗ ಮಹಾರಾಜಕೀ ಜೈ” ಎಂದು ಮಲ್ಲಯ್ಯನಿಗೆ ಜೈಕಾರ ಹಾಕುತ್ತಾ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಎಸೆದು ತಮ್ಮ ಭಕ್ತಿ ಭಾವ ಮೇರೆದರು. ಮಲ್ಲಯ್ಯನ ವಗ್ಗರು ಕೂಡ ಹಾಡನ್ನು ಹಾಡುತ್ತಾ ನೃತ್ಯ ಮಾಡಿದರು.

ಕುರಿ ಬದಲು, ಕುರಿ ಉಣ್ಣೆ ಅರ್ಪಣೆ.!
ಮಲ್ಲಯ್ಯನು ಗಂಗಸ್ನಾನಕ್ಕೆ ತೆರಳುವಾಗ ಭಕ್ತರು ಕುರಿ ಉಣ್ಣೆ, ಜೋಳದ ದಂಟು ಮಲ್ಲಯ್ಯನ ಪಲ್ಲಕ್ಕಿ ಮೇಲೆ ಅರ್ಪಿಸಿದರು. ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮಕೈಗೊಂಡ ಹಿನ್ನಲೆಯಲ್ಲಿ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿ ಎಸೆಯುವ ಬದಲು, ಭಕ್ತರು ಕುರಿ ಉಣ್ಣೆ, ಭಂಡಾರ ಅರ್ಪಣೆ ಮಾಡಿದರು.

ಎಲ್ಲೆಂದರಲ್ಲಿ ಅನ್ನದಾಸೋಹ
ರಾಜ್ಯದ ನಾನಾ ಭಾಗದಿಂದ ಬರುವ ಭಕ್ತರಿಗೆ, ಹರಕೆಹೊತ್ತ ಭಕ್ತರು ಅನ್ನದಾಸೋಹ ಮಾಡಿದರು. ಬೆಟ್ಟದ ಸುತ್ತಲೂ ಇರುವ ಹೊಲದಲ್ಲಿ ಶೆಡ್ ನಿರ್ಮಿಸಿ, ಅನ್ನ, ಸಾರು ಹಾಗು ಸಿಹಿ ದಾಸೋಹ ಏರ್ಪಡಿಸಿದ್ದರು. ದೂರದೂರಿನಿಂದ ಬಂದಂತ ಹ ಭಕ್ತರು ಮಲ್ಲಯ್ಯನ ಪ್ರಸಾದ ಸ್ವೀಕರಿಸಿ ಧನ್ಯತೆಗೆ ಪಾತ್ರರಾದರು.

ಅಚ್ಚಕಟ್ಟಾದ ಪೊಲೀಸರ ಬಂದೋಬಸ್ತ್
ಪ್ರತಿ ವರ್ಷ ಪೊಲೀಸರ ಬಂದೋಬಸ್ತ್ ಇದ್ದರೂ ಸಹ, ಒಂದಾದರು ಕುರಿ ಮರಿ ಎಸೆಯುವ ಭಕ್ತರ ಸಾಹಸಕ್ಕೆ ಜಿಲ್ಲಾ ಪೊಲೀಸರು ಕಟ್ಟುನಿಟ್ಟಿನ ಕ್ರಮ ವಹಿಸಿದ್ದಾರೆ. ಗ್ರಾಮದ ಸುತ್ತಲೂ ಆರು ಕಡೆ ಚೆಕ್ ಪೋಸ್ಟ್, ಜೊತೆಗೆ ಕುರಿ ಮರಿ ಸಂಗ್ರಹಣ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರ ಸೂಚನೆಯಂತೆ ಜಿಲ್ಲಾ ಪೊಲೀಸರು ಹೆಚ್ಚಿನ ಮುತುವರ್ಜಿ ವಹಿಸಿ, ಬಂದೋಬಸ್ತ್ ನೆರವೇರಿಸಿರುವುದು ಜಾತ್ರೆಯಲ್ಲಿ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next