ಯಾದಗಿರಿ: ಕೊರೊನಾ ಮಹಾಮಾರಿ ರೈತನ ಬಾಳಿನೊಂದಿಗೂ ಆಟವಾಡಿದ್ದು, ಲಾಕ್‌ಡೌನ್ ಹಿನ್ನೆಲೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ರೈತರ ಫಸಲಿಗೂ ಮಾರುಕಟ್ಟೆ ಸಿಗದೇ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಪ್ರಮುಖವಾಗಿ ತರಕಾರಿ ಬೆಳೆಗಳಾದ ಟೊಮ್ಯಾಟೋ, ಮೆಣಸಿನಕಾಯಿ, ಈರುಳ್ಳಿ, ಬದನೆಕಾಯಿ ಇತರೆ ಸೇರಿ 1200 ಹೆಕ್ಟೇರ್‌ಗೂ ಹೆಚ್ಚು ಬೆಳೆ ಬೆಳೆಯಲಾಗಿದೆ. ಅಲ್ಲದೇ ಕಲ್ಲಂಗಡಿ, ಬಾಳೆ, ಪಪ್ಪಾಯಿ, ಮಾವು, ಸಪೋಟಾ ಹಾಗೂ ದ್ರಾಕ್ಷಿ ಸೇರಿ 730 ಹೆಕ್ಟೇರ್‌ನಷ್ಟು ಹಣ್ಣುಗಳನ್ನು ಬೆಳೆಯಲಾಗಿದ್ದು ಖರೀದಿಸುವವರಿಲ್ಲದೇ ಅಕ್ಷರಶಃ ಹಾಳಾಗುತ್ತಿದೆ.
220 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಟೊಮ್ಯಾಟೋ ವಾರಕ್ಕೊಮ್ಮೆ ಟನ್‌ಗಳಟ್ಟಲೇ ಬೆಳೆ ಬರುತ್ತಿದೆ. ಆದರೆ ಸೂಕ್ತ ಸಂಚಾರ ವ್ಯವಸ್ಥೆಯಿಲ್ಲದೇ ಎಲ್ಲಿಯೂ ಸಾಗಿಸಲಾಗದೇ ರೈತ ಕೈಚೆಲ್ಲಿ ಕೂಡುವಂತಾಗಿದ್ದು, ಸಂಗ್ರಹಿಸಿಟ್ಟಿದ್ದ ಬೆಳೆಯೂ ಹಾಳಾಗಿ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತ ಶರಣಗೌಡ ಅಳಲು ತೋಡಿಕೊಂಡಿದ್ದಾರೆ. ಖರೀದಿಸುವವರು ಬಾರದಿರುವುದು ಬೆಳೆ ಹಾಳಾಗುವ ಆತಂಕದಲ್ಲಿ ಕೆಲವು ರೈತರು ಗ್ರಾಮಗಳಲ್ಲಿಯೇ ಸಿಕ್ಕಷ್ಟೇ ಸರಿ ಎಂದು ಅಗ್ಗದ ದರದಲ್ಲಿಯೂ ಮಾರಾಟ ಮಾಡಿಕೊಂಡಿದ್ದಾರೆ.
ಇನ್ನು ಕಲ್ಲಂಡಗಿ, ಪಪ್ಪಾಯಿ ಬೆಳೆದ ರೈತರ ಪಾಡು ಹೇಳತೀರದು. ಬಿರು ಬೇಸಿಗೆ ಈಗಷ್ಟೇ ಕಲ್ಲಂಗಡಿಗೆ ಭಾರೀ ಡಿಮ್ಯಾಂಡ್ ಬರುವ ಹೊತ್ತು. ಅದೇ ಸಮಯದಲ್ಲಿ ಸಂಕಷ್ಟ ಎದುರಾಗಿರುವುದು ರೈತರು ಕಣ್ಣೀರು ಹಾಕುವಂತಾಗಿದೆ. ಪಪ್ಪಾಯಿಗೆ ನೆರೆ ರಾಜ್ಯ ತೆಲಂಗಾಣದಲ್ಲಿ ಬೇಡಿಕೆಯಿತ್ತು. ಇದೀಗ ಲಾಕ್‌ಡೌನ್‌ನಿಂದಾಗಿ ಬೆಲೆಯೂ ಕುಸಿದಿದ್ದು 3-4 ರೂ. ಕೆ.ಜಿ ಕೇಳುತ್ತಿದ್ದಾರೆ ಎಂದು ರೈತ ಭೀಮರಾಯ ಹುಣಸಿಹೊಳೆ ಅಳಲು ತೋಡಿಕೊಂಡಿದ್ದಾರೆ.
ಅಷ್ಟು ದರಕ್ಕೆ ಮಾರಾಟ ಮಾಡಿದರೆ ಇಲ್ಲಿಂದ ಸರಕು ಸಾಗಿಸಿದ ವಾಹನ ಬಾಡಿಗೆಯೂ ಬೆಳೆ ಮಾರಾಟದಿಂದ ಬರಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅದೇನೇ ಇರಲಿ ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ರೈತರ ಕೈ ಹಿಡಿಯುವುದು ಅವಶ್ಯವಾಗಿದ್ದು, ಮಾನವೀಯ ದೃಷ್ಟಿಯಿಂದಾದರೂ ರೈತರು ಬೆಳೆದು ಹಾಳಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವ ಚಿಂತನೆ ಮಾಡಬೇಕಿದೆ.
ತೋಟಗಾರಿಗೆ ಬೆಳೆಗಿಲ್ಲ ವಿಮೆ ಸೌಲಭ್ಯ
ಸರ್ಕಾರದ ಮಾನದಂಡಗಳ ಪ್ರಕಾರ ಜಿಲ್ಲೆಯಲ್ಲಿ ಕೇವಲ ಮೆಣಸಿನಕಾಯಿಗೆ ಮಾತ್ರ ವಿಮೆ ಸೌಕರ್ಯವಿದೆ. ಉಳಿದ ತೋಟಗಾರಿಗೆ ಬೆಳೆಗೆ ಯಾವುದೇ ವಿಮೆ ಅನ್ವಯವಾಗುವುದಿಲ್ಲ. ಗ್ರಾಪಂವಾರು ಬೆಳೆ ಪ್ರಮಾಣ ಆಧರಿಸಿ ಸರ್ಕಾರವೇ ಯಾವ ಬೆಳೆಗೆ ವಿಮೆ ನೀಡಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಎನ್ನುವ ಮಾಹಿತಿ ಅಧಿಕಾರಿ ವಲಯದಿಂದ ತಿಳಿದು ಬಂದಿದೆ.
ಸಾವಿರಾರು ರೂ. ಸಾಲ ಮಾಡಿ ಬೆಳೆದ ಕಲ್ಲಂಡಗಿ ಕೈ ಹಿಡಿಯಲಿಲ್ಲ. ಬೆಳೆ ಬರುವ ವೇಳೆಗೆ ಬಂದ್ ಆಗಿದ್ದರಿಂದ ಎಲ್ಲಿಯೂ ಸಾಗಿಸಲಾಗಲಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದ್ದು, ಉಳಿದ ಬೆಳೆಯೂ ಹಾಳಾಗುವ ಭಯದ ಮಧ್ಯೆ ಅಗ್ಗದಲ್ಲಿ ಮಾರಾಟ ಮಾಡಿಕೊಳ್ಳುವಂತಾಯಿತು.
ಬಾಲಕೃಷ್ಣ, ರೈತ
ಅನೀಲ ಬಸೂದೆ