Advertisement

ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

12:11 PM Oct 04, 2019 | Naveen |

ಯಾದಗಿರಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅ. 5ರಂದು ಮಧ್ಯಾಹ್ನ 2:30ಕ್ಕೆ ಜಿಲ್ಲೆಗೆ ಆಗಮಿಸಿ ಪ್ರವಾಹದಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವರು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3:30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯಾದಗಿರಿ ಜಿಲ್ಲೆಯ ಪ್ರವಾಹ ಪರಿಹಾರ ಕಾರ್ಯಗಳ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸುವರು.

ಸಂಜೆ 5:00ಕ್ಕೆ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದುಕೊರತೆ ಆಲಿಸುವರು. ರಾತ್ರಿ 7:00ಕ್ಕೆ ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಪೂಜ್ಯ ಸದ್ಗುರು ವಿಶ್ವಾರಾಧ್ಯ ಸಿದ್ಧ ಸಂಸ್ಥಾನಕ್ಕೆ ಭೇಟಿ ನೀಡುವರು. ರಾತ್ರಿ 10:30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ಮಾತನಾಡಿ, ಮುಖ್ಯಮಂತ್ರಿಗಳ ಪ್ರವಾಸ ಹಿನ್ನೆಲೆಯಲ್ಲಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. 5 ಡಿಎಸ್‌ಪಿ, 14 ಸಿಪಿಐ, 38 ಪಿಎಸ್‌ಐ, 82 ಎಎಸ್‌ಐ, 665 ಹೆಡ್‌ಕಾನ್‌ಸ್ಟೆಬಲ್‌ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌, 382 ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ಡಿಎಆರ್‌, ಕೆಎಸ್‌ಆರ್‌ಪಿ ತುಕಡಿ ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರವಾಹದ ನೀರು ನುಗ್ಗಿದ ಒಟ್ಟು 442 ಮನೆಗಳಿಗೆ ಪ್ರತಿ ಮನೆಗೆ 10 ಸಾವಿರ ರೂ.ಗಳಂತೆ ಒಟ್ಟು 44.20 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿನ ಒಟ್ಟು 100 ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಅಲ್ಪಸ್ವಲ್ಪ ಹಾನಿಯಾಗಿದ್ದು, ಒಟ್ಟು 25 ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ.

Advertisement

ಪ್ರವಾಹದಿಂದಾಗಿ ಅಂದಾಜು ಒಟ್ಟು 10,153 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಈ ಪೈಕಿ ಪರಿಹಾರ ತಂತ್ರಾಂಶದಲ್ಲಿ 6913 ಹೆಕ್ಟೇರ್‌ (ಶೇ.68 ಪ್ರತಿಶತ) ಡಾಟಾ ಎಂಟ್ರಿ ಆಗಿದ್ದು, ಬಾಕಿ ಎಂಟ್ರಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

25 ಕೋಟಿ ರೂ. ಹಿಂಗಾರು ಪರಿಹಾರ: 2018-19ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಉಂಟಾದ ಬೆಳೆಹಾನಿಗೆ 25 ಕೋಟಿ ರೂ. ಪರಿಹಾರ ಬಂದಿದೆ. ಅಂದಾಜು ಒಟ್ಟು 29,098 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಈ ಪೈಕಿ ಬರ ಪರಿಹಾರ ತಂತ್ರಾಂಶದಲ್ಲಿ 14,212 ಹೆಕ್ಟೇರ್‌ (ಶೇ.49) ಡಾಟಾ ಎಂಟ್ರಿ ಆಗಿದೆ. ಬಾಕಿ ಎಂಟ್ರಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ್‌
ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್‌.ಸೋಮನಾಳ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next