Advertisement

ಹತ್ತಿ ಬೆಳೆಗೆ ಸಿಗುವುದೇ ಸೂಕ್ತ ಬೆಲೆ?

12:26 PM Nov 10, 2019 | Naveen |

„ಅನೀಲ ಬಸೂದೆ
ಯಾದಗಿರಿ:
ರೈತ ಬೆವರು ಸುರಿಸಿ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ರಸ್ತೆಯುದ್ದಕ್ಕೂ ದಲ್ಲಾಳಿಗಳ ದರ್ಬಾರ್‌ನಿಂದಾಗಿ ಕೈ ಕೆಸರಾದರೂ ಬಾಯಿ ಮೊಸರಾಗಲಿಲ್ಲ ಎನ್ನುವಂತಾಗಿದೆ.

Advertisement

ಜಿಲ್ಲೆಯ ಶಹಾಪುರ, ಸುರಪುರ, ಯಾದಗಿರಿ ಹಾಗೂ ವಡಗೇರಾ ವ್ಯಾಪ್ತಿಯಲ್ಲಿ ಅತೀ ಹೆಚ್ಚಿನ ರೈತರು ಮುಂಗಾರಿನಲ್ಲಿ ಹತ್ತಿ ಬೆಳೆದಿದ್ದು, ಈಗ ಹತ್ತಿ ಕಟಾವಿಗೆ ಬಂದು ರೈತರು ಕಟಾವಿನಲ್ಲಿ ತೊಡಗಿದ್ದು, ಸುಮಾರು 1 ತಿಂಗಳಿನಿಂದ ಹತ್ತಿ ಖರೀದಿ ಜೋರಾಗಿ ಸಾಗಿದೆ.

ಈ ಮಧ್ಯೆ ಜಿಲ್ಲೆಯ ಬಹುತೇಕ ಕಡೆ ರಸ್ತೆಯುದ್ದಕ್ಕೂ ದಲ್ಲಾಳಿಗಳು ರೈತರಿಂದ ಹತ್ತಿ ಖರೀದಿಸಲು ತಾತ್ಕಾಲಿಕ ವ್ಯಾಪಾರ ಆರಂಭಿಸಿದ್ದು, ಇದರಿಂದ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ರೈತರಿಂದ ಖರೀದಿಸುತ್ತಿರುವುದು ಅಮಾಯಕ ರೈತರು ಬೆಳೆಗೆ ನಗದು ಸ್ಥಳದಲ್ಲಿಯೇ ದೊರೆಯುವ ಒಂದೇ ಕಾರಣಕ್ಕೆ ಶ್ರಮ ಲೆಕ್ಕಿಸದೇ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.

ಕ್ವಿಂಟಲ್‌ಗೆ ಮೂರ್‍ನಾಲ್ಕು ಕೆ.ಜಿ ಹೊಡೆತ: ಹತ್ತಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದನ್ನೇ ಬಂಡವಾಳವಾಗಿಸಿಕೊಂಡು ಲಾಭ ಪಡೆಯುತ್ತಿರುವ ರಸ್ತೆ ಬದಿ ದಲ್ಲಾಳಿಗಳು ರೈತರು ಬೆಳೆದ ಬೆಳೆಯನ್ನು 4,800 ರೂ. ಆಸುಪಾಸಿನ ದರದಲ್ಲಿ ಖರೀದಿಸುತ್ತಿದ್ದು, ಅದರಲ್ಲಿ ಅನಧಿಕೃತವಾಗಿ ಎರಡು ಕೆ.ಜಿ ಹತ್ತಿ, ಹಮಾಲಿ ಶುಲ್ಕ ಇತರ ಕಟಾವು ಮಾಡುತ್ತಿದ್ದು, ಸರಿಸುಮಾರು ಕ್ವಿಂಟಲ್‌ ಬೆಳೆಗೆ 3-4 ಕೆ.ಜಿಯಷ್ಟು ಹೊಡೆತ ಬೀಳುತ್ತಿರುವುದು ಗಮನಕ್ಕೆ ಬಂದರೂ ರೈತರ ಪಾಡು ಯಾರಿಗೂ ಹೇಳಿಕೊಳ್ಳದಂತಾಗಿದೆ.

ದಲ್ಲಾಳಿಗಳಿಗೆ ಚುರುಕು ಮುಟ್ಟಿಸಿದ ಅಧಿಕಾರಿಗಳು: ಈ ಮಧ್ಯೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ರಸ್ತೆ ಬದಿ ವ್ಯಾಪಾರ ಮಾಡುವುದನ್ನು ನಿಲ್ಲಿಸಿ, ಮಾರುಕಟ್ಟೆಯಲ್ಲಿ ಸೂಕ್ತ ಸೌಕರ್ಯ ಒದಗಿಸಲಾಗುವುದು. ಇಲ್ಲಿಯೇ ಖರೀದಿಸುವಂತೆ ಹಲವು ಬಾರಿ ಹೇಳಿದರೂ ಕ್ಯಾರೇ ಎನ್ನದ ದಲ್ಲಾಳಿಗಳಿಗೆ ಚುರುಕು ಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಈಗಾಗಲೇ ಹಲವರಿಗೆ ನೋಟಿಸ್‌ ನೀಡಿದ್ದು, ಕಳೆದ 15 ದಿನಗಳಲ್ಲಿ 3.80 ಲಕ್ಷ ರೂ. ದಂಡ ವಿಧಿಸಿದ್ದಾರೆ.

Advertisement

ಸರ್ಕಾರದ ನಿಗದಿತ ಬೆಲೆ ದೊರೆಯಲಿ: ಸರ್ಕಾರ ಹತ್ತಿಗೆ ಗುಣಮಟ್ಟದ ಆಧಾರದಲ್ಲಿ ಕ್ವಿಂಟಲ್‌ಗೆ 5,250ರಿಂದ 5,550 ರೂ. ನಿಗದಿ ಮಾಡಿದೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಖರೀದಿಸುವಂತೆ ಆದೇಶ ನೀಡದಿರುವುದು ದಲ್ಲಾಳಿಗಳಿಗೆ ವರವಾಗಿ ಪರಿಣಮಿಸಿದ್ದು, ಕಾನೂನು ಚೌಕಟ್ಟಿನಲ್ಲಿ ರೈತರಿಂದ ಬೆಳೆ ಖರೀದಿಸಿ ನಿಗದಿತ ಬೆಲೆ ದೊರೆಯುವಂತಾಗಬೇಕು ಎನ್ನುತ್ತಾರೆ ರೈತ ಮುಖಂಡರು.

ಹತ್ತಿ ನಿಗಮದ ಒಪ್ಪಂದ ಫಲ ನೀಡುವುದೇ?: ಜಿಲ್ಲೆಯಲ್ಲಿ ರೈತರು ಬೆಳೆದಿರುವ ಹತ್ತಿ ಬೆಳೆಗೆ ಸೂಕ್ತ ಬೆಲೆ ಮತ್ತು ರೈತರಿಗಾಗುತ್ತಿರುವ ಅನ್ಯಾಯ ತಡೆಯಲು ಮುಂದಾಗಿರುವ ಜಿಲ್ಲಾಡಳಿತ ಹತ್ತಿ ಖರೀದಿಸಲು ಭಾರತೀಯ ಹತ್ತಿ ನಿಗಮದ ಅಧಿ ಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ಜಿಲ್ಲೆಯ ಐದು ಕಡೆ ಖರೀದಿಗೆ ನಿಗಮ ಒಪ್ಪಿದೆ ಎನ್ನುವ ಮಾಹಿತಿ ಕೃಷಿ ಮಾರುಕಟ್ಟೆ ಅಧಿಕಾರಿಗಳಿಂದ ಲಭ್ಯವಾಗಿದ್ದು, ಶೀಘ್ರವೇ ಖರೀದಿ ಆರಂಭಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದದ ಪ್ರಕಾರ ಖರೀದಿ ಆರಂಭವಾದರೆ ರೈತರಿಗೆ ನ್ಯಾಯಯುತ ಬೆಲೆ ದೊರೆಯಲಿದ್ದು, ಸ್ಥಳದಲ್ಲಿಯೇ ಕೈಗೆ ಹಣದ ಜೊತೆಗೆ ಅನ ಧಿಕೃತ ಕಡಿತದ ಹೊರೆಯೂ ತಪ್ಪಲಿದೆ. ಸೋಮವಾರದಿಂದಲೇ ಖರೀದಿ ಆರಂಭಿಸುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next