Advertisement

ಕೊರೊನಾ ಗಾಬರಿ ಪಡುವ ಅಗತ್ಯವಿಲ್ಲ: ಕೂರ್ಮಾರಾವ್‌

01:42 PM Mar 06, 2020 | Naveen |

ಯಾದಗಿರಿ: ಕೊರೊನಾ ವೈರಸ್‌ ಬಗ್ಗೆ ಯಾರು ಗಾಬರಿಪಡಬಾರದು. ಮುಂಜಾಗ್ರತಾ ಕ್ರಮವಾಗಿ ಎಚ್ಚರಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೊರೊನಾ ವೈರಸ್‌ ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೆರೆ ರಾಜ್ಯ ತೆಲಂಗಾಣದಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಬಗ್ಗೆ ಸುಳಿವೇ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದು, ಯಾರು ಗಾಬರಿಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಕೊರೊನಾ ವೈರಸ್‌ ಪ್ರಕರಣಗಳನ್ನು ಸಾಂಕ್ರಾಮಿಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮ ಅನುಸರಿಸುವ ಕುರಿತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಂಬಂಧಪಟ್ಟ ಮೆಡಿಕಲ್‌ ಕಾಲೇಜುಗಳ ಡೀನ್‌ ಹಾಗೂ ಸದಸ್ಯರು, ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಜಿಲ್ಲಾ ಪ್ರತಿನಿಧಿಗಳು, ಕೆಎಸ್‌ ಆರ್‌ಟಿಸಿ ವಿಭಾಗೀಯ ನಿಯಂತ್ರಕರು ಸೇರಿದಂತೆ ವಿವಿಧ ಇಲಾಖೆ ಮುಖ್ಯಸ್ಥರು, ಅಧಿಕಾರಿಗಳ ತಂಡ ರಚಿಸಿ ಕೊರೊನಾ ವೈರಸ್‌ ಬಗ್ಗೆ ಭಯ ಭೀತರಾಗದಂತೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನವಣೆ ಮಾತನಾಡಿ, ಬೇರೆ ಕಡೆಯಿಂದ ಬಂದ ಪ್ರಯಾಣಿಕರಿಗೆ ಯಾವುದೇ ರೀತಿಯ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತುರ್ತಾಗಿ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಬಳಿ ಕರೆದುಕೊಂಡು ಹೋಗಿ ಪರಿಶೀಲಿಸಿ ಚಿಕಿತ್ಸೆ ನೀಡಬೇಕು. ಜತೆಗೆ ಜಿಲ್ಲೆಯ ಹೊರಹೊಲಯದಲ್ಲಿ ಕೊರೊನಾ ವೈರಸ್‌ ಬಗ್ಗೆ ಅರಿವು ಮೂಡಿಸುವ ಬ್ಯಾನರ್‌ಗಳು ಹಾಕಬೇಕು ಎಂದು ಆರೋಗ್ಯ
ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಂ.ಎಸ್‌ ಪಾಟೀಲ ಮಾತನಾಡಿ, ಜ್ವರ, ತಲೆ ನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ ಹಾಗೂ ಭೇದಿ ಇವು ಕೊರೊನಾ ವೈರಸ್‌ ಲಕ್ಷಣಗಳಾಗಿವೆ. ಸಾರ್ವಜನಿಕರು ಮುಂಜಾಗ್ರತ ಕ್ರಮವಾಗಿ ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಬೇಕು.

Advertisement

ಶಂಕಿತ ರೋಗಿ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು. ಟ್ರಿಪಲ್‌ ಲೇಯರ್‌ ಮಾಸ್ಕ್ ಬಳಸಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆಗಾಗೆ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್, ಕೈ ವಸ್ತ್ರ ಉಪಯೋಗಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗಳಬಾರದು. ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ನಾರಾಯಣಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next