ಯಾದಗಿರಿ: ಕೊರೊನಾ ವೈರಸ್ ಎಲ್ಲೆಡೆ ಆತಂಕ ಸೃಷ್ಟಿಸಿದ್ದು, ಗಡಿ ಜಿಲ್ಲೆ ಯಾದಗಿರಿಯಲ್ಲಿ ಆತಂಕ ಹೆಚ್ಚಾಗಿದೆ. ಜಿಲ್ಲೆಯ ಕೆಲವರು ವಿದೇಶಕ್ಕೆ ಹೋಗಿ ಬಂದಿದ್ದು ಅಂತವರ ಮೇಲೆ ನಿಗಾ ವಹಿಸಲಾಗಿದ್ದು, ಸೈದಾಪುರ ಪಟ್ಟಣದ ಚಿನ್ನದ ಇಬ್ಬರು ವ್ಯಾಪಾರಿಗಳು ಮಾರ್ಚ್ 5ರಂದು ದುಬೈ ಪ್ರವಾಸ ಮಾಡಿ ಇದೇ ತಿಂಗಳು 12ರಂದು ಹೈದ್ರಾಬಾದ್ ವಿಮಾನ ನಿಲ್ದಾಣ ಮೂಲಕ ಹಿಂತಿರುಗಿದ್ದಾರೆ.
ಶಹಾಪುರದಲ್ಲಿ ನಾಲ್ಕು ಜನರು ವಿದೇಶದಿಂದ ಆಗಮಿಸಿದ್ದು, ಸುರಪುರದಲ್ಲಿ ಒಬ್ಬರು ವಿದೇಶದಿಂದ ಬಂದಿದ್ದು, ಅವರಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ. ಮುನ್ನೆಚ್ಚರಿಕೆಯಾಗಿ 14 ದಿನ ಪ್ರತ್ಯೇಕವಾಗಿರಿಸಿ ನಿಗಾ ವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರು ಸಂಚಾರ ಮಾಡುವುದು ವಿರಳವಾಗಿದ್ದು, ಈಶಾನ್ಯ ಸಾರಿಗೆ ಸಂಸ್ಥೆ ವಾಹನಗಳು ನಿತ್ಯ ಸಂಚರಿಸುವ ಮಾರ್ಗದಲ್ಲಿ ಸಂಚರಿಸುತ್ತಿವೆ. ಆದರೆ ಪ್ರಯಾಣಿಕರು ಇಲ್ಲದೇ ಅನಿವಾರ್ಯವಾಗಿ ಕಡಿಮೆ ವಾಹನಗಳನ್ನು ರಸ್ತೆಗಿಳಿಸುವ ಪರಿಸ್ಥಿತಿ ಬಂದಿದ್ದು, ಇದರಿಂದ ಸಾರಿಗೆ ಆದಾಯ ಕುಂಠಿತವಾಗುತ್ತಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.
ಇನ್ನು ಸ್ಥಳೀಯ ವ್ಯಾಪಾರ ವಹಿವಾಟು ಜಿಲ್ಲೆಯಲ್ಲಿ ಎಂದಿನಂತೆ ನಡೆದಿದ್ದು, ಕೊಂಚ ಮಟ್ಟಿಗೆ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗೆ ಬರುತ್ತಿದ್ದು, ವ್ಯಾಪಾರ ವಹಿವಾಟು ಕುಂಟುತ್ತ ಸಾಗಿತ್ತು.
ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಸಮಾರಂಭ ನಡೆಸದಂತೆ ಮತ್ತು ಶಾಲಾ ಕಾಲೇಜು, ಸಿನಿಮಾ ಮಂದಿರ, ಮಾಲ್‌ಗಳನ್ನು ಬಂದ ಮಾಡುವಂತೆ ಆದೇಶಿಸಿದ್ದು, ಶನಿವಾರ ಜಿಲ್ಲೆಯ ಬಹುತೇಕ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದು, ರವಿವಾರದಿಂದ 1ರಿಂದ 6ನೇ ತರಗತಿ ವರೆಗೆ ರಜೆ ಜಾರಿಗೆ ಬರಲಿದೆ. 7ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆಗಳು ಮಾತ್ರ ನಡೆಯಲಿದ್ದು, ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.