ಯಾದಗಿರಿ: ಚೀನಾವನ್ನು ತೀವ್ರ ತಲ್ಲಣಗೊಳಿಸುತ್ತಿರುವ ಕೊರೊನಾ ವೈರಸ್ ಇದೀಗ ಇತರ ದೇಶಗಳಿಗೂ ಹರಡಲಾರಂಭಿಸಿದ್ದು, ನೆರೆಯ ತೆಲಂಗಾಣ ರಾಜ್ಯದ ಒಬ್ಬರಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವುದು ಗಡಿ ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ಹುಟ್ಟಿಸಿದೆ.
ತೆಲಂಗಾಣ ರಾಜ್ಯದಿಂದ ಕೆಲವೇ ಕಿ.ಮೀಟರ್ ಅಂತರದಲ್ಲಿ ಇರುವ ಜಿಲ್ಲೆಯ ಜನರು ನಿತ್ಯ ಹೈದ್ರಾಬಾದ್, ಮಹಬೂಬ ನಗರ, ತಾಂಡೂರ ಹಾಗೂ ನಾರಾಯಣಪೇಟ್‌ಗೆ ವ್ಯಾಪಾರ ವಹಿವಾಟಿಗಾಗಿ ತೆರಳುವುದು ಸಾಮಾನ್ಯವಾಗಿದ್ದು, ಎಲ್ಲಿ ಭಯಾನಕ ರೋಗ ಹರಡುತ್ತದೋ ಎನ್ನುವ ಚಿಂತೆಯಲ್ಲಿ ಮುಳುಗುವಂತೆ ಮಾಡಿದೆ.
ಯಾದಗಿರಿ, ಗುರುಮಠಕಲ್, ಶಹಾಪುರನ ನೂರಾರು ಜನರು ನಿತ್ಯ ಹೈದ್ರಾಬಾದ್‌ನೊಂದಿಗೆ ಸಂಪರ್ಕ ಹೊಂದಿದ್ದು, ಭಯಾನಕ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡು ಸಾಧ್ಯತೆಗಳು ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.
ಮೊದ ಮೊದಲು ಜ್ವರ, ನೆಗಡಿ, ಕೆಮ್ಮು ಬಳಿಕ ಉಸಿರಾಟ ತೊಂದರೆ ಕಾಣಿಸಿಕೊಳ್ಳುವುದು ಭಯಾನಕ ಕೊರೊನಾ ಕಾಯಿಲೆ ಲಕ್ಷಣವಾಗಿದ್ದು, ಗ್ರಾಮೀಣ ಅಲ್ಲದೇ ನಗರದ ಭಾಗದಲ್ಲಿ ಸಾಮಾನ್ಯವಾಗಿ ತಕ್ಷಣವೇ ಆಸ್ಪತ್ರೆಗೆ ತೆರಳುವುದು ವಿರಳ. ಪ್ರಥಮ ಚಿಕಿತ್ಸೆ ರೂಪದಲ್ಲಿ ತಮಗೆ ತಿಳಿದ ಕೆಲ ಗುಳಿಗೆ ತೆಗೆದುಕೊಂಡು ಕಮ್ಮಿಯಾಗದಿದ್ದರೇ ಆಸ್ಪತ್ರೆಗೆ ತೆರಳುವವರು ಸಾಕಷ್ಟು ಜನರಿದ್ದಾರೆ.
ಈ ರೀತಿಯ ನಿರ್ಲಕ್ಷವೂ ವೈರಸ್ ಬೇರೂರುವುದಕ್ಕೆ ಕಾರಣವಾಗುವ ಸಾಧ್ಯತೆಯಿದ್ದು, ಹಾಗಾಗಿ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಕಂಡ ತಕ್ಷಣ ಆಸ್ಪತ್ರೆಗೆ ತೆರಳುವುದು ಸೂಕ್ತ ಎನ್ನಲಾಗಿದೆ. ಕೊರೊನಾ ವೈರಸ್ ಆತಂಕದಿಂದ ಮುನ್ನೆಚ್ಚರಿಕೆಯಾಗಿ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ 5 ಬೆಡ್ ಸಾಮರ್ಥ್ಯದ ವಿಶೇಷ ಚಿಕಿತ್ಸಾ ಘಟಕ
ತೆರೆಯಲಾಗಿದ್ದು, ಅಲ್ಲಿ ಬೇಕಿರುವ ಅಗತ್ಯ ಉಪಕರಣಗಳು, ಹಾಗೂ ಇತರೆ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ.
ಸಾರಿಗೆ ಬಸ್ ಬಣ ಬಣ: ತೆಲಂಗಾಣ ರಾಜ್ಯದಲ್ಲಿ ಕೊರೊನಾ ವೈರಸ್ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಗಡಿ ಜಿಲ್ಲೆಯ ಜನರು ಹೈದ್ರಾಬಾದ್‌ಗೆ ಪ್ರಯಾಣಿಸಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ನಿತ್ಯ ಜನರಿಂದ ತುಂಬಿರುತ್ತಿದ್ದ ತೆಲಂಗಾಣ ಮಾರ್ಗದಲ್ಲಿ ಚಲಿಸುವ ಸಾರಿಗೆ ವಾಹನಗಳು ಈಗ ಜನರಿಲ್ಲದೇ ಬಣಗೂಡುತ್ತಿದೆ.
ಯಾದಗಿರಿ ಜಿಲ್ಲೆಯಿಂದ 13 ಸಾರಿಗೆ ವಾಹನಗಳು ನಿತ್ಯ ಸಂಚರಿಸುತ್ತಿದ್ದು, ಪರಿಗಿ ಘಟಕದ ಸುಮಾರು 8ಕ್ಕೂ ಹೆಚ್ಚು ವಾಹನಗಳು ಹೈದ್ರಾಬಾದ್, ಗುರುಮಠಕಲ್, ಯಾದಗಿರಿ ಮಾರ್ಗವಾಗಿ ಎಂದಿನಂತೆ ಸಂಚರಿಸುತ್ತಿವೆ.