ಯಾದಗಿರಿ: ಜಿಲ್ಲೆಯ ಶಿಕ್ಷಕರ ಬಡ್ತಿ ತಡೆಗೆ ಯಾದಗಿರಿ ಜಿ.ಪಂ ಸಿಇಓ ಆದೇಶ ನೀಡಿದ್ದು ತರುವಾಯ ಶಿಕ್ಷಕರ ಭಾರಿ ವಿರೋಧದ ಕೂಗಿನ ಹಿನ್ನೆಲೆಯಲ್ಲಿ ಆದೇಶ ನೀಡಿದ ಮೂರು ದಿನಗಳಲ್ಲಿಯೇ ಹಿಂಪಡೆದ ಪ್ರಸಂಗ ಜಿಲ್ಲೆಯಲ್ಲಿ ನಡೆದಿದೆ. ಶಿಕ್ಷಕರ ಬಡ್ತಿ ತಡೆಗೆ ಆದೇಶಿಸಿದ್ದು ಅವರೇ, ಇದೀಗ ಆದೇಶ ಹಿಂಪಡೆದದ್ದು ಅವರೇ ಎಂಬುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
2023-24ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಕೊನೆಯ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸದ ಅನುದಾನಿತ ಹಾಗೂ ಸರಕಾರಿ ಶಿಕ್ಷಕರ ಬಡ್ತಿಗೆ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಓ ಗರೀಮಾ ಪನ್ವಾರ್ ಅವರು ತಡೆ ಹಿಡಿದು ಜೂ.24 ರಂದು ಆದೇಶ ಹೊರಡಿಸಿದ್ದರು.
ಆದೇಶ ಹೊರಡಿಸಿದ ಬೆನ್ನಲ್ಲೆ ಜಿಲ್ಲೆಯಲ್ಲಿ ಅನೇಕರ ಅಪಸ್ವರ ಕೇಳಿಬಂತು, ಶಿಕ್ಷಕರ ಸಂಘದ ಆದಿಯಾಗಿ, ಜನ ಪ್ರತಿನಿಧಿಗಳು ಸಹ ಆದೇಶವನ್ನು ತಡೆ ಹಿಡಿಯುವಲ್ಲಿ ಅಪಾರ ಒತ್ತಡ ಹಾಕಿದ್ದರು ಎನ್ನಲಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾಗೂ ಫಲಿತಾಂಶದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕೆ ಹೊರತು, ಈ ರೀತಿ ಶಿಕ್ಷಕರ ಬಡ್ತಿಯ ಭವಿಷ್ಯದ ಮೇಲೆ ಬರೆ ಎಳೆಯುವುದು ಸರಿಯಲ್ಲ ಎಂದು ಪ್ರೌಢಶಾಲಾ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಕೆಂಭಾವಿ ಅವರು ದೂರಿದ್ದಾರೆ.
ಅನೇಕರ ವಿರೋಧದ ನಡುವೆ ಇದೀಗ ಜಿ.ಪಂ ಸಿಇಓ ಅವರು ತಾವು ಹೊರಡಿಸಿದ್ದ ಆದೇಶವನ್ನೇ ಕೇವಲ ಮೂರು ದಿನಗಳಲ್ಲಿ ಅಂದರೆ ಜೂ.27ರಂದು ಹಿಂಪಡೆದು, ಭುಗಿಲೆದ್ದ ಶಿಕ್ಷಕರ ಆತಂಕವನ್ನು ತಣ್ಣಗಾಗಿಸಿದ್ದಾರೆ. ಮೊದಲು ಆದೇಶ ಹೊರಡಿಸಿದವರು ಅವರೇ, ಇದೀಗ ಒತ್ತಡದ ನಡುವೆ ಆದೇಶವನ್ನು ಹಿಂಪಡೆದವರೂ ಸಹ ಅವರೇ ಆಗಿರುವ ಸಿಇಓ ಅವರ ನಡೆ ಎರಡು ದೋಣಿಯ ಮೇಲೆ ಕಾಲಿಟ್ಟಂತಾಗಿದೆ.
ಇಡೀ ಜಿಲ್ಲೆಯ ಶಿಕ್ಷಕರ ಬಡ್ತಿಯ ತಡೆಗೆ ಆದೇಶ ನೀಡುವ ಮೊದಲು ಕೊಂಚ ಯೋಚಿಸಬೇಕಿತ್ತು ಎನ್ನುವ ಮಾತುಗಳು ಶಿಕ್ಷಕರ ವಲಯದಲ್ಲಿ ಕೇಳಿಬಂದಿದ್ದು, ಮಕ್ಕಳ ಭವಿಷ್ಯದ ಏಳಿಗೆಯಲ್ಲಿ ಶಿಕ್ಷಕರ ಪಾಲು ಹಾಗೂ ಪ್ರಯತ್ನ ಎರಡೂ ಇದ್ದೇ ಇರುತ್ತವೆ ಎಂದು ಶಿಕ್ಷಕರೊಬ್ಬರು ಕಳವಳ ವ್ಯಕ್ತಪಡಿಸಿದರು.
ಶಿಕ್ಷಕರ ಬಡ್ತಿ ತಡೆಗೆ ಆದೇಶಿಸಿದ್ದು ಶಿಕ್ಷಕರ ವಲಯದಲ್ಲಿ ನೋವುಂಟು ಮಾಡಿತ್ತು, ಮೂರು ದಿನದ ಬಳಿಕ ಸಿಇಓ ಅವರು ಆದೇಶ ಹಿಂಪಡೆದಿದ್ದು ಚಿಂತೆ ದೂರು ಮಾಡಿದೆ. ಬಡ್ತಿ ತಡೆಗೆ ಆದೇಶ ನೀಡಿದ ಬೆನ್ನಲ್ಲೆ ಜಿಲ್ಲೆಯ ಪ್ರತಿನಿಧಿಗಳು ಸೇರಿದಂತೆ ಅನೇಕ ಪ್ರಜ್ಞಾವಂತರು ವಿರೋಧಿಸಿ, ಶಿಕ್ಷಕರ ಬೆನ್ನಿಗೆ ನಿಂತಿರುವುದು ಸಂತಸದ ಜೊತೆಗೆ ನಿರುಮ್ಮಳತೆ ಉಂಟಾಗಿದೆ. ಮುಂದಿನ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪ್ರಯತ್ನ ಮುಂದುವರೆಯಲಿದೆ ಎಂದು ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಕೆಂಭಾವಿ ಹೇಳಿದರು.
ಪತ್ರ ಬರೆದ ನಮೋಶಿ: ಯಾದಗಿರಿ ಜಿಲ್ಲೆಯ ಶಿಕ್ಷಕರ ವಾರ್ಷಿಕ ಬಡ್ತಿಯನ್ನು ತಡೆ ಹಿಡಿಯುವಂತೆ ಸಿಇಓ ಅವರ ಆದೇಶವನ್ನು ರದ್ದು ಪಡಿಸಬೇಕೆಂದು ವಿಧಾನ ಪರಿಷತ್ತಿನ ಸದಸ್ಯರಾದ ಶಶೀಲ್ ಜಿ. ನಮೋಶಿ ಅವರು ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ರಿತೇಶ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಶಿಕ್ಷಕರ ಬಡ್ತಿ ವಿಚಾರದಲ್ಲಿ ತಡೆ ಹಿಡಿದ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದರು.