Advertisement

ಕೃಷ್ಣಾ-ಭೀಮಾ ತೀರದಲ್ಲಿ ಪ್ರವಾಹ

01:57 PM Aug 10, 2019 | Naveen |

ಯಾದಗಿರಿ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿ ಪಾತ್ರಕ್ಕೆ 4.70 ಲಕ್ಷ ಕೂಸೆಕ್‌ ನೀರು ಹರಿಬಿಟ್ಟಿರುವುದು ಕೃಷ್ಣಾ ತೀರದಲ್ಲಿ ಪ್ರವಾಹ ಕಡಿಮೆಯಾಗುವ ಲಕ್ಷಗಳು ಕಾಣುತ್ತಿಲ್ಲ. ಈ ನಡುವೆ ಸನ್ನತ್ತಿ ಬ್ಯಾರೇಜ್‌ನಿಂದ ಭೀಮಾ ನದಿಗೆ 2.85 ಲಕ್ಷ ಕ್ಯೂಸೆನ್‌ ನೀರು ಹರಿಬಿಟ್ಟಿದ್ದು, ನದಿ ಪಾತ್ರದ ಜನರಿಗೆ ದಿಕ್ಕು ತೋಚದಂತ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಪಾತ್ರಕ್ಕೆ ಹೆಚ್ಚಿನ ನೀರು ಹರಿಬಿಡುತ್ತಿರುವುದು ನದಿ ಪಾತ್ರದ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಯಾನಿಯಾಗಿದ್ದು, ರೈತರು ತೀವ್ರ ಆತಂಕಕ್ಕೀಡಾಗಿದ್ದಾರೆ. ನದಿ ಪಾತ್ರದ ಗ್ರಾಮಗಳ ಸಮೀಪಕ್ಕೆ ಪ್ರವಾಹ ನೀರು ಹರಿಯುತ್ತಿರುವುದು, ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ವಡಗೇರಾ ತಾಲೂಕಿನ ಭೀಮಾ ನದಿ ಪಾತ್ರದ ಶಿವನೂರ ಗ್ರಾಮಕ್ಕೆ ನೀರು ನುಗ್ಗುವ ಭಯ ಆವರಿಸಿದೆ.

ಭೀಮಾ ನದಿಯಿಂದ ರಭಸವಾಗಿ ನೀರು ಹರಿಯುತ್ತಿರುವುದರಿಂದ ಕೇವಲ 40 ನಿಮಿಷಗಳಲ್ಲಿಯೇ ಜೋಳದಡಗಿ ಸೇತುವೆಗೆ ನೀರು ತುಂಬಿ ಸೇತುವೆ ಸಂಪೂರ್ಣ ಜಲಾವೃತವಾಗಿ ಮೇಲಿಂದ ನೀರು ಹರಿಯುತ್ತಿದೆ. ನೀರು ಹರಿಸುವ ಕುರಿತು ಗೊತ್ತಿದ್ದರೂ ಜೋಳದಡಗಿ ಸೇತುವೆ ಗೇಟ್ ತೆರೆಯದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಇದರಿಂದಾಗಿ ಹಿನ್ನೀರು ಗ್ರಾಮಗಳ ಜಮೀನುಗಗಳಿಗೆ ನುಗ್ಗುತ್ತಿದ್ದು, ಇದರಿಂದ ಇನ್ನಷ್ಟು ಹಾನಿಯಾಗಲಿದೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಮುದ್ನಾಳ ಭೇಟಿ: ಕೃಷ್ಣಾ ನದಿ ಪಾತ್ರದ ಶಹಾಪುರ ತಾಲೂಕಿನ ಕೊಳ್ಳೂರು ಎಂ. ಸೇತುವೆ ಸಂಪೂರ್ಣ ಮುಳುಗಡೆಯಾಗಿ ನದಿ ಪಾತ್ರದ ಜಮೀನುಗಳು ನೀರಿನಲ್ಲಿ ಆವರಿಸಿದ್ದು, ನದಿ ಹಿನ್ನೀರು ಕೊಳ್ಳೂರು ಎಂ ಗ್ರಾಮಕ್ಕೆ ನುಗ್ಗಿರುವುದರಿಂದ ಕೊಳ್ಳೂರು, ಮರಕಲ್ ಹಾಗೂ ಹೇಮನೂರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಹಳ್ಳ ಜಲಾವೃತವಾಗಿದ್ದು, ಸಂಚಾರ ಸ್ಥಗಿತವಾಗಿದೆ. ಘಟನಾ ಸ್ಥಳಕ್ಕೆ ಶಾಸಕ ವೆಂಕಟರೆಡ್ಡಿ ಮುದ್ನಾಳ ತಹಶೀಲ್ದಾರರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸನ್ನತಿ ಬ್ಯಾರೇಜ್‌ಗೆ ಭೇಟಿ ನೀಡಿದ ಶಾಸಕರು, ಉಜನಿ ಜಲಾಶಯದಿಂದ ಸನ್ನತಿಗೆ ಬ್ಯಾರೇಜ್‌ಗೆ ಹೆಚ್ಚಿನ ನೀರು ಬಿಡುತ್ತಿರುವುದರಿಂದ ಈಗಾಗಲೇ ಯಾದಗಿರಿ ಭೀಮಾನದಿ ಪಾತ್ರಕ್ಕೆ 2.85 ಲಕ್ಷ ಕ್ಯೂಸೆಕ್‌ ನೀರು ಹರಿಸುತ್ತಿರುವುದರಿಂದ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮಕ್ಕೆ ನೀರು ನುಗ್ಗುವ ಭೀತಿ ಆವರಿಸಿರುವುದರಿಂದ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತನಾಡಿದರು. ಯಾವುದೇ ಕಾರಣಕ್ಕೆ ನದಿ ಪಾತ್ರಕ್ಕೆ ತೆಳದಂತೆ ಸೂಚನೆ ನೀಡಿ, ಪರಿಹಾರ ಕೇಂದ್ರಗಳಿಗೆ ಮುನ್ನೆಚ್ಚರಿಕೆಯಾಗಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದರು.

ನಂತರ ಪ್ರವಾಹ ಭೀತಿ ಎದುರಿಸುತ್ತಿರುವ ವಡಗೇರಾ ತಾಲೂಕಿನ ಶಿವನೂರು ಗ್ರಾಮಕ್ಕೆ ಭೇಟಿ ನೀಡಿ, ಭೀಮಾ ನದಿ ಪ್ರವಾಹವನ್ನು ವೀಕ್ಷಿಸಿದರು. ಅಲ್ಲಿಂದ ಜೋಳದಡಗಿ ಸೇತುವೆಗೆ ಭೇಟಿ ನೀಡಿದರು. ಭೀಮಾ ಪ್ರವಾಹದಿಂದ ಸೇತುವೆ ಉಕ್ಕಿ ಹರಿಯುತ್ತಿದ್ದು, ಸಂಪೂರ್ಣ ಸೇತುವೆ ಜಲಾವೃತಗೊಂಡಿದೆ. ಜೋಳದಡಗಿ ಸೇತುವೆಯ ಗೇಟ್ ತೆರೆದರೆ ಶಿವನೂರು ಗ್ರಾಮಕ್ಕೆ ಇಷ್ಟು ನೀರು ಬರುತ್ತಿರಲಿಲ್ಲ ಎಂದು ಗ್ರಾಮಸ್ಥರು ಶಾಸಕರೆದುರು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಜಿಪಂ ಸದಸ್ಯ ಭೀಮರೆಡ್ಡಿ ಕೂಡ್ಲೂರ, ಮಾಜಿ ಜಿಪಂ ಶ್ರೀನಿವಾಸರೆಡ್ಡಿ ಚನ್ನೂರ, ಉಮಾರೆಡ್ಡಿ ನಾಯ್ಕಲ್, ಸಿದ್ಧಣ್ಣಗೌಡ ಕಾಡಂನೋರ, ವೀರುಪಾಕ್ಷರೆಡ್ಡಿ ಮಾಚನೂರ, ಶಹಾಪುರ ತಹಶೀಲ್ದಾರ್‌ ಸಂಗಮೇಶ ಜಿಡಗೆ, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಸೂಗುರೆಡ್ಡಿ ಇತರರು ಇದ್ದರು.

Advertisement

ಜಿಲ್ಲಾಧಿಕಾರಿ ಭೇಟಿ: ನೆರೆಯ ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಾದ ಕಾರಣ ಜಲಾಶಯಗಳಿಂದ ಹೆಚ್ಚುವರಿಯಾದ ನೀರು ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ಬಿಟ್ಟಿರುವುದರಿಂದ, ನದಿ ಪಾತ್ರದಲ್ಲಿರುವ ಪ್ರವಾಹ ಪೀಡಿತ ಗ್ರಾಮಗಳಿಗೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಅವರು ಶುಕ್ರವಾರ ಭೇಟಿ ನೀಡಿ, ಜನರ ರಕ್ಷಣಾ ಕ್ರಮಗಳನ್ನು ಪರಿಶೀಲಿಸಿದರು.

ಶಿವನೂರು, ಜೋಳದಡಗಿ ಬ್ರಿಡ್ಜ್, ಸಂಗಮ ಗ್ರಾಮಗಳು ಹಾಗೂ ಬೆಂಡೆಬೆಂಬಳಿ ಪ್ರವಾಹ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಪರಿಹಾರ ಕೇಂದ್ರಗಳಿಗೆ ನೇಮಿಸಿರುವ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಹಾಗೂ ಮೇಲ್ವಿಚಾರಣೆ ನೋಡಲ್ ಅಧಿಕಾರಿಗಳು ಪ್ರವಾಹ ಸಂತ್ರಸ್ತರಿಗೆ ಆಹಾರ, ಕುಡಿಯುವ ನೀರು, ಶೌಚಾಲಯ ಹಾಗೂ ಇನ್ನಿತರೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ನಂತರ ಸ್ಥಳೀಯರೊಂದಿಗೆ ಚರ್ಚಿಸಿ, ಅತಿವೃಷ್ಟಿಯಿಂದ ಆಗಬಹುದಾದ ತೊಂದರೆಗಳನ್ನು ಎದುರಿಸಲು ಜಿಲ್ಲಾಡಳಿತವು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿರುತ್ತಾರೆ. ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಪ್ರವಾಹದ ಕುರಿತು ಯಾವುದಾದರೂ ದೂರುಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಕಂಟ್ರೋಲ್ ರೂಮ್‌ ದೂರವಾಣಿ ಸಂಖ್ಯೆ:08473-253771 ಸಂಪರ್ಕಿಸಲು ಕೋರಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನಾವಣೆ ಉಪಸ್ಥಿತರಿದ್ದರು.

ಮುಂದುವರಿದ ಶೋಧ: ಗುರುವಾರ ಭೀಮಾನದಿ ಪಾತ್ರದ ಕೌಳೂರು ಬಳಿ ಪ್ರವಾಹದಲ್ಲಿ ಕೊಚ್ಚಿ ಹೋದ ರೈತ ಸಾಬರೆಡ್ಡಿಗಾಗಿ ಈವರೆಗೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್‌ ತಂಡ ಶೋಧ ಕಾರ್ಯ ನಡೆಸುತ್ತಿದ್ದು, ಈ ವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಸುಮಾರು 24 ಗಂಟೆಯಿಂದ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಪತ್ತೆ ಕಾರ್ಯ ಮುಂದುವರಿದಿದೆ.

ಹೆಚ್ಚಿದ ಪ್ರವಾಹ ನೀರಿನ ಪ್ರಮಾಣ: ಗುರುವಾರ ಯಾದಗಿರಿಯ ಗುರುಸಣಿಗೆ ಬ್ಯಾರೇಜ್‌ನಿಂದ ನದಿ ಪಾತ್ರಕ್ಕೆ 1.20 ಲಕ್ಷ ಕ್ಯೂಸೆಕ್‌ ನೀರು ಹರಿಬಿಡಲಾಗಿತ್ತು. ಇನ್ನೂ ಕೃಷ್ಣಾ ನದಿ ಪಾತ್ರಕ್ಕೆ 4.70 ಲಕ್ಷ ಕ್ಯೂಸೆಕ್‌ ನೀರು ಹರಿಯುತ್ತಿದ್ದು, ಪ್ರವಾಹಕ್ಕೆ ಜಿಲ್ಲೆಯ ಶಹಾಪುರ, ಸುರಪುರ ಹಾಗೂ ವಡಗೇರಾ ತಾಲೂಕಿನ ಜನರು ನಲುಗಿ ಹೋಗಿದ್ದು, ಜಮೀನುಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ.

Advertisement

Udayavani is now on Telegram. Click here to join our channel and stay updated with the latest news.

Next