ಯಾದಗಿರಿ: ಡೆಂಘೀ ರೋಗ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಈ ರೋಗ ನಿಯಂತ್ರಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ ಪಾಟೀಲ ದೋರನಹಳ್ಳಿ ಹೇಳಿದರು.
ನಗರದ ಸರಕಾರಿ ಪದವಿ ಮಹಾವಿದ್ಯಾಲಯದಿಂದ ಸುಭಾಷ ವೃತ್ತದವರೆಗೆ ಬುಧವಾರ ಡೆಂಘೀ ವಿರೋಧಿ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಳೆಗಾಲ ಇರುವುದರಿಂದ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗಿ ರೋಗಗಳು ಹರಡುತ್ತವೆ. ರೋಗಗಳ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಆದ್ದರಿಂದ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಗ್ರಾಮದ, ಮನೆ ಸುತ್ತಮುತ್ತಲಿನ ಜನರಿಗೆ ಹಾಗೂ ಓಣಿಯ ಜನರಿಗೆ ಸ್ವಚ್ಛತೆ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಕಸ-ಕಡ್ಡಿ, ತ್ಯಾಜ್ಯ ವಸ್ತುಗಳ್ನು ಚರಂಡಿಗಳಲ್ಲಿ ಎಸೆಯಬಾರದು. ನೀರಿನ ತೊಟ್ಟಿಗಳನ್ನು ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ಸ್ವಚ್ಛಗೊಳಿಸಿ, ಬಿಸಿಲಿನಲ್ಲಿ ಒಣಗಿಸಿದ ನಂತರ ನೀರನ್ನು ಮರು ಶೇಖರಿಸಬೇಕು. ಮನೆಯ ಅಕ್ಕ-ಪಕ್ಕದಲ್ಲಿ ತೆಂಗಿನ ಚಿಪ್ಪು, ಪ್ಲಾಸ್ಟಿಕ್, ಟೈರ್, ಟೈರ್ ಟ್ಯೂಬ್‌ನಂತಹ ವಸ್ತುಗಳಲ್ಲಿ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ| ಸೂರ್ಯಪ್ರಕಾಶ ಎಂ. ಕಂದಕೂರ ಮಾತನಾಡಿ, ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ ಹಾಗೂ ಆನೆಕಾಲು ರೋಗಗಳು ಸೊಳ್ಳೆ ಕಚ್ಚುವುದರಿಂದ ಹರಡುತ್ತವೆ. ಇಂತಹ ಕಾಯಿಲೆಗಳು ಬರದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಡೆಂಘೀ ವೈರಾಣು ನಾಶ ಮಾಡಲು ಯಾವುದೇ ನಿಖರ ಔಷಧಿ ಇಲ್ಲ. ಆದ್ದರಿಂದ ಇದಕ್ಕೆ ಮುನ್ನೆಚ್ಚರಿಕೆ ಅಗತ್ಯವಾಗಿದೆ ಎಂದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ| ಭಗವಂತ ಅನವಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ಸರಕಾರಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ| ಅಶೋಕರೆಡ್ಡಿ, ದೇವಿಂದ್ರಪ್ಪ, ಹಿರಿಯ ಆರೋಗ್ಯ ಸಹಾಯಕ ಪರಮರೆಡ್ಡಿ ಕಂದಕೂರ, ಸಮಾಲೋಚಕ ಬಸವರಾಜ ಕಾಂತಾ ಇದ್ದರು.