ಯಾದಗಿರಿ: ಜಿಲ್ಲಾಡಳಿತದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಜ. 21ರಂದು ಬೆಳಗ್ಗೆ 11:00ಕ್ಕೆ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಶಂಕರಗೌಡ ಎಸ್. ಸೋಮನಾಳ ಹೇಳಿದರು.
ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಯಂತ್ಯೋತ್ಸವ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಂದು ಬೆಳಗ್ಗೆ 9:00ಕ್ಕೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಅದರಂತೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ-ಕಾಲೇಜುಗಳಲ್ಲಿಯೂ ಶ್ರದ್ಧಾ, ಭಕ್ತಿಯೊಂದಿಗೆ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಡ್ಡಾಯವಾಗಿ ಆಚರಿಸಬೇಕು. ಹೊಸ ತಾಲೂಕುಗಳು ಸೇರಿದಂತೆ ತಾಲೂಕು ಮಟ್ಟದಲ್ಲಿ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಆಯಾ ತಹಶೀಲ್ದಾರರು ಕ್ರಮ ವಹಿಸುವಂತೆ ಸೂಚಿಸಿದರು.
ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಮಾಜದ ಮುಖಂಡರು, ವಿದ್ಯಾರ್ಥಿಗಳು, ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು ಜಿಲ್ಲಾ ಅಂಕಿತ ಅಧಿಕಾರಿಗಳಿಗೆ ಸೂಚಿಸಿದರು. ಜಯಂತಿಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚಿಸಿದರು.
ಜಯಂತಿ ಕಾರ್ಯಕ್ರಮದ ನಿರೂಪಕರು ಹಾಗೂ ಉಪನ್ಯಾಸಕರನ್ನು ನೇಮಿಸಬೇಕು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ನಿಗದಿತ ದಿನಾಂಕದೊಳಗೆ ವಿತರಿಸಬೇಕು. ಜಯಂತಿಯನ್ನು ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ಆಚರಿಸಲು ತಯಾರಿ ಮಾಡಿಕೊಳ್ಳುವಂತೆ ಸಂಬಂಧಿಸಿದಿ ಅಧಿಕಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ
ನಿರ್ದೇಶಕ ದತ್ತಪ್ಪ ಸಾಗನೂರ ಅವರಿಗೆ ಸೂಚಿಸಿದರು.
ಜಿಲ್ಲಾ ಟೋಕರಿ, ಕೋಲಿ, ಕಬ್ಬಲಿಗ ಸಮಾಜದ ಅಧ್ಯಕ್ಷ ಉಮೇಶ ಕೆ. ಮುದ್ನಾಳ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗೌರಮ್ಮ ದೊಂತಾ ಸಭೆ ನಡಾವಳಿ ಓದಿದರು. ಡಿಡಿಪಿಯು ಚಂದ್ರಶೇಖರ ಜೆ. ಹಿಳ್ಳಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾ ಧಿಕಾರಿ ಬಿ. ರೇವಣ್ಣ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ದೈಹಿಕ ಶಿಕ್ಷಣಾ ಧಿಕಾರಿ ವಿಶ್ವನಾಥ ಕಡ್ಡಿ ಇದ್ದರು.
ಜಿಲ್ಲಾ ಕೋಲಿ ಸಮಾಜದ ಅಧ್ಯಕ್ಷ ಹನುಮಂತ ಮಡ್ಡಿ, ಗೌರವಾಧ್ಯಕ್ಷ ಸಿ.ಎಂ.ಪಟ್ಟೇದಾರ, ಸಮಾಜದ ಮುಖಂಡರಾದ ದೇವಿಂದ್ರಪ್ಪ ಬೆಸ್ತ, ಶರಣಪ್ಪ ಮೋಟ್ನಳ್ಳಿ, ಮೌಲಾಲಿ ಅನಪೂರ, ಚಂದ್ರಶೇಖರ ಬಾಡಿಯಾಳ, ಹಣಮಂತಪ್ಪ ಬಳಿಚಕ್ರ, ಸುರೇಶ ಕೋಟಿಮನಿ, ಭೀಮಾಶಂಕರ ದೋರನಹಳ್ಳಿ, ಸುರೇಶ ಮಡ್ಡಿ, ಚಂದ್ರಕಾಂತ ಮಡ್ಡಿ, ದೇವಿಂದ್ರಪ್ಪ ಬಳಿಚಕ್ರ ಪಾಲ್ಗೊಂಡಿದ್ದರು.