Advertisement

ಸಂವಿಧಾನ ಪಾಲನೆಯಿಂದ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ

12:51 PM Apr 15, 2019 | Naveen |

ಯಾದಗಿರಿ: ಭಾರತದ ಸಂವಿಧಾನ ಎಲ್ಲ ಸಮುದಾಯ, ಜಾತಿ, ಜನಾಂಗದವರಿಗೆ ಸಮಾನತೆ ಕಲ್ಪಿಸಿದೆ. ಇಂತಹ ಸಂವಿಧಾನ
ನೀಡಿದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಆಶಯದಂತೆ ಸಂವಿಧಾನ ಪಾಲಿಸಿದಲ್ಲಿ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತ್ಯೋತ್ಸವ ಆಚರಣೆ ಸಮಿತಿ ಸಂಯುಕ್ತಾಶ್ರಯದಲ್ಲಿ ರವಿವಾರ ನಡೆದ ಭಾರತರತ್ನ, ಮಹಾನ್‌ ಮಾನವತಾವಾದಿ,
ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ 128ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶೋಷಿತ ಹಾಗೂ ಬಡ ಕುಟುಂಬದಲ್ಲಿ ಜನಿಸಿದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ತಾವು ಅನುಭವಿಸಿದ ಕಷ್ಟ ಇತರರು ಅನುಭವಿಸಬಾರದು ಎಂದು ಸಮಾನತೆಗಾಗಿ ಹೋರಾಡಿದರು. ಡಾ| ಅಂಬೇಡ್ಕರ್‌ ಅವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ. ಅವರು ವಿಶ್ವ ನಾಯಕರಾಗಿದ್ದಾರೆ. ಅವರು ನೀಡಿದ
ಸಂವಿಧಾನ ಕೊಡುಗೆಯಿಂದ ಪ್ರತಿಯೊಬ್ಬರು ಸಂತೋಷದ ಜೀವನ ನಡೆಸಲು ಸಾಧ್ಯವಾಗಿದೆ. ವಿಶ್ವಸಂಸ್ಥೆ ಕೂಡ ಡಾ| ಅಂಬೇಡ್ಕರ್‌ ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ
ಆಚರಿಸುತ್ತಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನವಣೆ ಮಾತನಾಡಿ, ಡಾ| ಬಿ.ಆರ್‌. ಅಂಬೇಡ್ಕರ್‌ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ನಮ್ಮ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಅವರ ತತ್ವ, ಆದರ್ಶ ಅಳವಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ
ನೀಡಿದರು.

ಉಪನ್ಯಾಸ ನೀಡಿದ ಉಪನ್ಯಾಸಕ ಡಾ| ಬಿ.ಎಸ್‌.ಸಿಂಗೆ, ಡಾ| ಬಿ.ಆರ್‌. ಅಂಬೇಡ್ಕರ್‌ ಅವರನ್ನು ದಲಿತ ನಾಯಕರು ಎಂದು
ಗುರುತಿಸಲಾಗುತ್ತಿದೆ. ಸಮಾಜದ ಎಲ್ಲ ಜನರಿಗಾಗಿ ಹೋರಾಟ ಮಾಡಿದ ವ್ಯಕ್ತಿಯನ್ನು ದಲಿತ ನಾಯಕ ಎಂದು ಗುರುತಿಸುವುದು
ಸರಿಯಲ್ಲ. ಬಾಬಾಸಾಹೇಬ ಅವರ ತತ್ವ, ಸಿದ್ಧಾಂತ, ವಿಚಾರ, ಆಲೋಚನೆಗಳು ಆಚರಣೆಗೆ ಬರದೆ ಪ್ರಜ್ಞಾವಂತರಿಗೆ ತಲುಪದೇ ಹಾಗೆ ಉಳಿದಿವೆ. ಎಲ್ಲರೂ ಅಧ್ಯಯನ ಮಾಡುವುದು ಅವಶ್ಯಕತೆ ಇದೆ ಎಂದು ಹೇಳಿದರು.

Advertisement

ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಪರಿಶಿಷ್ಟ ಪಂಗಡ ಇಲಾಖೆ ಉಪನಿರ್ದೇಶಕ ಬಂದೇನವಾಜ್‌, ಜಯಂತ್ಯುತ್ಸವ ಸಮಿತಿ
ಜಿಲ್ಲಾಧ್ಯಕ್ಷ ಮರೆಪ್ಪ ಚಟ್ಟೇರಕರ್‌, ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು, ಸಾರ್ವಜನಿಕರು, ಮಹಿಳೆಯರು ಪಾಲ್ಗೊಂಡಿದ್ದರು.

ಲಿಂಗೇರಿ ಸ್ಟೇಷನ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ತಂಡದವರು ನಾಡಗೀತೆ
ಹಾಡಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಲ್ಲಾಭಕ್ಷ ಸ್ವಾಗತಿಸಿದರು. ಉಪನ್ಯಾಸಕಿ ಡಾ| ಜ್ಯೋತಿಲತಾ ತಡಿಬಿಡಿಮಠ
ಕಾರ್ಯಕ್ರಮ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next