ಒಂದು ಕೊಲೆ, ಅದರ ಹಿಂದೆ ಹಲವು ಆಯಾಮಗಳು, ಕ್ಷಣ ಕ್ಷಣಕ್ಕೂ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿರುವ ಘಟನೆಗಳು, ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು, ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು.. ಹೀಗೆ ಆರಂಭದಿಂದಲೇ ಕುತೂಹಲದೊಂದಿಗೆ ಸಾಗುವ ಸಿನಿಮಾ “ಯದಾ ಯದಾ ಹೀ’. ಒಂದು ಮರ್ಡರ್ ಮಿಸ್ಟರಿ ಸಿನಿಮಾಕ್ಕೆ ಮುಖ್ಯವಾಗಿ ಬೇಕಾದ ಗುಣವೆಂದರೆ ರೋಚಕತೆ. ಅದು ಈ ಚಿತ್ರದಲ್ಲಿ ಯಥೇತ್ಛವಾಗಿದೆ. ಕ್ಷಣ ಕ್ಷಣವೂ ಮಗ್ಗುಲು ಬದಲಿಸುತ್ತಾ ಸಾಗುವುದೇ ಈ ಸಿನಿಮಾದ ಹೈಲೈಟ್.
ಸಿನಿಮಾ ತೆರೆದುಕೊಳ್ಳುವುದೇ ಒಂದು ಕೊಲೆಯಿಂದ. ಆ ಕೊಲೆಯ ಹಿಂದಿನ ಉದ್ದೇಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ಅಷ್ಟಕ್ಕೂ ಪೊಲೀಸ್ ಆಫೀಸರ್ ನ ಆಕೆ ಕೊಲೆ ಮಾಡಿದ್ದು ಯಾಕೆ? ಕೊಲೆ ಬಳಿಕ ಆಕೆ ಹೇಳಿದ ಅಂಶಗಳು ಎಷ್ಟು ನಿಜ? ನಿಜಕ್ಕೂ “ಆಕೆ’ ಇಲ್ಲಿ ಅಷ್ಟೊಂದು ಮುಗ್ಧಳಾ ಅಥವಾ ಆಕೆಯ ಹೇಳುವ “ಕಥೆ’ ಹಿಂದೆ ಇನ್ನೊಂದು “ಉಪಕಥೆ’ ಇದೆಯಾ.. ಇಂತಹ ಸಣ್ಣ ಸಣ್ಣ ಕುತೂಹಲದೊಂದಿಗೆ ಸಾಗುವ ಸಿನಿಮಾ ಪ್ರೇಕ್ಷಕರನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುವುದು ಈ ಸಿನಿಮಾದ ಪ್ಲಸ್ ಪಾಯಿಂಟ್.
ಬಿಗಿಯಾದ ಚಿತ್ರಕಥೆ, ಅದಕ್ಕೆ ಪೂರಕವಾದ ನಿರೂಪಣೆ ಸಿನಿಮಾವನ್ನು ಚೆಂದಗಾಣಿಸಿದೆ. ಇಲ್ಲಿ ಬರುವ ಪ್ರತಿ ಪಾತ್ರಗಳಿಗೆ ಬೇರೆ ಬೇರೆ ಶೇಡ್ ಇದೆ. ಒಮ್ಮೆಲೇ ಒಂದು ಪಾತ್ರವನ್ನು ನಂಬಿ, ಅಂತಿಮ ನಿರ್ಧಾರಕ್ಕೆ ಬರುವಂತಿಲ್ಲ. ಆ ತರಹದ ಒಂದು ಕಥೆ ಇದು. ಅಂದಹಾಗೆ, ಸಣ್ಣಪುಟ್ಟ ತಪ್ಪುಗಳನ್ನು ಬದಿಗಿಟ್ಟು ನೋಡಿದರೆ “ಯದಾ ಯದಾ ಹೀ’ ಪ್ರೇಕ್ಷಕರಿಗೆ ಖುಷಿ ಕೊಡುವ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಇಲ್ಲಿ ಬರುವ ಸೂಕ್ಷ್ಮ ದೃಶ್ಯಗಳು ಕೂಡಾ ಮುಂದೆ ಸಿನಿಮಾಕ್ಕೆ ದೊಡ್ಡ ಲೀಡ್ ಕೊಡುತ್ತದೆ.
ಇನ್ನು, ಇಡೀ ಸಿನಿಮಾ ಮೂರು ಪಾತ್ರಗಳ ಸುತ್ತ ಸಾಗುತ್ತದೆ. ಹರಿಪ್ರಿಯಾ, ವಸಿಷ್ಠ ಹಾಗೂ ದಿಗಂತ್. ಮೂವರು ಕೂಡಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ನಟಿ ಹರಿಪ್ರಿಯಾ ಅವರಿಗೆ ಇದು ಸವಾಲಿನ ಪಾತ್ರ. ಈ ಸವಾಲನ್ನು ಅವರು ಯಶಸ್ವಿಯಾಗಿ ನಿಭಾಹಿಸಿದ್ದಾರೆ. ಉಳಿದಂತೆ ಚಿತ್ರದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.
ರವಿಪ್ರಕಾಶ್ ರೈ