ನ್ಯೂಯಾರ್ಕ್ : ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಫೋರ್‌ಬ್ಸ್ ಪಟ್ಟಿಯಲ್ಲಿ ಚೀನದ ಅದ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಇದೇ ಮೊದಲ ಬಾರಿಗೆ ಅಗ್ರಸ್ಥಾನ ಪಡೆದಿದ್ದಾರೆ.
ಈ ಪ್ರತಿಷ್ಠೆಯ ಅಗ್ರ ಸ್ಥಾನವನ್ನು ಪಡೆಯುವಲ್ಲಿ ಚೀನ ಅಧ್ಯಕ್ಷ ಜಿನ್‌ಪಿಂಗ್ ಅವರು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಪದಚ್ಯುತಗೊಳಿಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಪಟ್ಟಿಯ ಟಾಪ್ ಟೆನ್‌ನಲ್ಲಿ ಸ್ಥಾನಪಡೆಯುವ ಮೂಲಕ ಮಿಂಚಿದ್ದಾರೆ.
ಫೋರ್‌ಬ್ಸ್ ವಿಶ್ವದ 75 ಅತ್ಯಂತ ಪ್ರಭಾವಿ ವ್ಯಕ್ತಿಗಳ 2018ರ ಪಟ್ಟಿಯನ್ನು ಸಿದ್ಧಪಡಿಸಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 9ನೇ ಸ್ಥಾನವನ್ನು ಪಡೆದಿರುವುದು ಗುರುತರ ಸಾಧನೆ ಎಂದು ಬಣ್ಣಿಸಲಾಗಿದೆ.
“ಈ ಭೂಗ್ರಹದಲ್ಲಿ 7.5 ಶತಕೋಟಿ ಜನರು ಇದ್ದಾರೆ; ಇವರಲ್ಲಿ ವಿಶ್ವವನ್ನೇ ಬದಲಿಸಬಲ್ಲ 75 ಅತ್ಯಂತ ಪ್ರಭಾವಿ ಪುರುಷರು ಹಾಗೂ ಮಹಿಳೆಯರನ್ನು ನಾವು ಗುರುತಿಸಿದ್ದೇವೆ. ಪ್ರತೀ ನೂರು ದಶಲಕ್ಷ ಜನರಲ್ಲಿ ಒಬ್ಬರಂತೆ ಈ 75 ಮಂದಿಯನ್ನು ನಾವು ಗುರುತಿಸಿದ್ದೇವೆ. ನಾವಿರುವ ಈ ಜಗತ್ತಿಗೆ ಈ 75 ಪ್ರಭಾವಿಗಳು ಅತ್ಯಂತ ಮಹತ್ವಪೂರ್ಣ ವ್ಯಕ್ತಿಗಳಾಗಿದ್ದಾರೆ’ ಎಂದು ಫೋರ್‌ಬ್ಸ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಫೋರ್‌ಬ್ಸ್ ಸಿದ್ಧಪಡಿಸಿರುವ ವಿಶ್ವದ 75 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ 67ರ ಹರೆಯದ ಪ್ರಧಾನಿ ನರೇಂದ್ರ ಮೋದಿ ಅವರಿದ್ದರೆ ಅವರ ಬಳಿಕದಲ್ಲಿ ಪೇಸ್ ಬುಕ್ ಸಿಇಓ ಮಾರ್ಕ್ ಝುಕರ್‌ಬರ್ಗ್ (13), ಬ್ರಿಟನ್ ಪ್ರಧಾನಿ ತೆರೇಸಾ ಮೇ (14), ಚೀನೀ ಪ್ರಧಾನಿ ಲೀ ಕೆಕಿಯಾಂಗ್ (15), ಆ್ಯಪಲ್ ಸಿಇಓ ಟಿಂ ಕುಕ್ (24) ಇದ್ದಾರೆ.