ಬೀಜಿಂಗ್: ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಐದು ವರ್ಷಗಳ ದಾಖಲೆಯ ಮೂರನೇ ಅವಧಿಗೆ ಭಾನುವಾರ ಮರು ಆಯ್ಕೆಯಾಗಿದ್ದಾರೆ. ಅಂದರೆ ಕ್ಸಿ ಜಿನ್ ಪಿಂಗ್ ಅವರು ಮತ್ತೆ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಅಧಿಕೃತ ನಿವೃತ್ತಿ ವಯಸ್ಸು 68 ದಾಟಿದರೂ, 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದರೂ 69ರ ಹರೆಯದ ಕ್ಸಿ ಜಿನ್ ಪಿಂಗ್ ಮತ್ತೆ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಪಕ್ಷದ ಸ್ಥಾಪಕ ಮಾವೋ ಝೆಡಾಂಗ್ ಬಳಿಕ ಕಮ್ಯೂನಿಸ್ಟ್ ಪಕ್ಷದ ಇತಿಹಾಸದಲ್ಲೇ ಎರಡು ಅವಧಿಗಿಂತ ಹೆಚ್ಚು ಕಾಲ ಅಧ್ಯಕ್ಷ ಸ್ಥಾನದಲ್ಲಿ ವೀರಾಜಮಾನರಾದ ಖ್ಯಾತಿಯೂ ಜಿನ್ ಪಿಂಗ್ ಗೆ ದೊರೆಯುತ್ತದೆ.
ಇದನ್ನೂ ಓದಿ:ಇಂದು ಭಾರತ-ಪಾಕ್ ಚುಟುಕು ಕದನ: ಹೇಗಿದೆ ಮೆಲ್ಬರ್ನ್ ಹವಾಮಾನ? ಮಳೆ ಸಾಧ್ಯತೆ ಎಷ್ಟಿದೆ?
ಕೇಂದ್ರ ಸಮಿತಿಯ ಸದಸ್ಯರು ಭಾನುವಾರ 25 ಸದಸ್ಯರ ರಾಜಕೀಯ ಬ್ಯೂರೋವನ್ನು ಆಯ್ಕೆ ಮಾಡಿದರು, ಅದು ದೇಶವನ್ನು ಆಳಲು ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿದೆ. ವಿಶೇಷವೆಂದರೆ, ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ 7 ಸದಸ್ಯರ ಪೈಕಿ, ದೇಶದ ನಂ.2 ಸ್ಥಾನದಲ್ಲಿರುವ ಪ್ರಧಾನಿ ಲಿ ಕೆಖೀಯಾಂಗ್ ಸೇರಿದಂತೆ ನಾಲ್ವರ ಹೆಸರನ್ನು ಕೈಬಿಡಲಾಗಿದೆ. ಶನಿವಾರ ಬಿಡುಗಡೆಯಾದ ಪಕ್ಷದ ಹೊಸ 205 ಸದಸ್ಯರ ಸೆಂಟ್ರಲ್ ಕಮಿಟಿ ಪಟ್ಟಿಯಲ್ಲಿ ಇವರ ಹೆಸರು ಇಲ್ಲ.
ಚುನಾವಣೆಯ ನಂತರ, ಕ್ಸಿ ಹೊಸದಾಗಿ ಚುನಾಯಿತ ಸ್ಥಾಯಿ ಸಮಿತಿಯೊಂದಿಗೆ ಭಾನುವಾರ ಇಲ್ಲಿ ಮಾಧ್ಯಮದ ಮುಂದೆ ಕಾಣಿಸಿಕೊಂಡರು. ‘ಸೆಣಸಾಡುವ ಧೈರ್ಯ, ಗೆಲ್ಲುವ ಛಲ, ತಲೆ ತಗ್ಗಿಸಿ ದುಡಿಯಿರಿ, ಮುನ್ನುಗ್ಗುವ ಸಂಕಲ್ಪ ತೊಡಿ’ ಎಂದರು.