ಮುಂಬೈ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (Melbourne Cricket Ground) ನಲ್ಲಿ ನಡೆದ ಬಾರ್ಡರ್ ಗಾವಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಬಿಜಿಟಿ ಸರಣಿಯಲ್ಲಿ ಆಸೀಸ್ ತಂಡವು 2-1 ಅಂತರದ ಮುನ್ನಡೆ ಸಾಧಿಸಿದೆ. 184 ರನ್ ಸೋಲಿನ ಬಳಿಕ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ((World Test Championship) ಫೈನಲ್ ತಲುಪುವ ಆಸೆಗೆ ದೊಡ್ಡ ಹಿನ್ನಡೆಯಾಗಿದೆ.
ರವಿವಾರ (ಡಿ.29) ಪಾಕಿಸ್ತಾನ ವಿರುದ್ದ ಗೆದ್ದ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಂಡಿದೆ. ಉಳಿದ ಮತ್ತೊಂದು ಸ್ಥಾನಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪೈಪೋಟಿ ಆರಂಭವಾಗಿದೆ.
ಮೆಲ್ಬೋರ್ನ್ ಸೋಲಿನ ಬಳಿಕ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಭಾರತವು 55.89 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 58.89 ರೊಂದಿಗೆ ಎರಡನೇ ಸ್ಥಾನದಲ್ಲಿದೆ.
ಸೋಲಿನ ಬಳಿಕ ಭಾರತದ ಫೈನಲ್ ಪ್ರವೇಶದ ಅವಕಾಶಗಳು ಕ್ಷೀಣಿಸಿದೆ. ಆದರೆ ಇನ್ನೂ ಅವಕಾಶವಿದೆ. ಡಬ್ಲ್ಯೂಟಿಸಿ ಫೈನಲ್ ಗೆ ಅರ್ಹತೆ ಪಡೆಯಲು, ಭಾರತವು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯವನ್ನು ಗೆಲ್ಲಬೇಕು. ಮತ್ತೊಂದೆಡೆ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಒಂದೇ ಒಂದು ಪಂದ್ಯ ಗೆಲ್ಲಬಾರದು. ಹೀಗಾದಲ್ಲಿ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಕೆಳಕ್ಕೆ ಜಾರಿ ಭಾರತ ಮೇಲಕ್ಕೇರುತ್ತದೆ.
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯು ಜ.29ರಿಂದ ಆರಂಭವಾಗಲಿದೆ. ಎರಡೂ ಪಂದ್ಯಗಳು ಗಾಲೆಯಲ್ಲಿ ನಡೆಯಲಿದೆ.