ಹೊಸದಿಲ್ಲಿ : ”ಕೇಂದ್ರ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕಾತಿಯನ್ನು ಆಗ್ರಹಿಸಿ ನಾನು ಪ್ರಧಾನಿ ನರೇಂದ್ರ ಮೋದಿಗೆ ಕಳೆದ ನಾಲ್ಕು ವರ್ಷಗಳಲ್ಲಿ 43 ಪತ್ರಗಳನ್ನು ಬರೆದಿದ್ದೇನೆ; ಆದರೆ ಅವರಿಂದ ಒಂದಕ್ಕೂಉತ್ತರಬಂದಿಲ್ಲ; ಹಾಗಾಗಿ ಈಗ ಲೋಕಪಾಲರ ನೇಮಕಾತಿಯನ್ನು ಆಗ್ರಹಿಸಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದು ನನಗೆ ಅನಿವಾರ್ಯವಾಗಿದೆ” ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾರ ವಿರೋಧಿ ಆಂದೋಲನದ ಹರಿಕಾರ, ಅಣ್ಣಾ ಹಜಾರೆ ಹೇಳಿದ್ದಾರೆ.
ಅಣ್ಣಾ ಅವರು ಮಾರ್ಚ್ 23ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಆಮರಣ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು.
ನಿನ್ನೆ ಶುಕ್ರವಾರದ ಮೊದಲ ದಿನ ಅವರ ಸತ್ಯಾಗ್ರಹದಲ್ಲಿ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಅಸ್ಸಾಂ ನಿಂದ ಬಂದ ಸುಮಾರು 5ರಿಂದ 6 ಸಾವಿರ ಜನರು ಪಾಲ್ಗೊಂಡರು.
ಹೊಸ ಚುನಾವಣಾ ಸುಧಾರಣೆ ಮತ್ತು ದೇಶದಲ್ಲಿನ ಕೃಷಿ ಬಿಕ್ಕಟ್ಟನ್ನು ನಿವಾರಿಸುವಲ್ಲಿನ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯ ಅನುಷ್ಠಾನವನ್ನೂ ಅಣ್ಣಾ ಆಗ್ರಹಿಸುತ್ತಿದ್ದಾರೆ.
”ಸತ್ಯಾಗ್ರಹ ಆರಂಭಿಸುವ ಮುನ್ನಾ ದಿನವಾದ ಗುರುವಾರ, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮತ್ತು ಮಹಾರಾಷ್ಟ್ರದ ಕೆಲವು ಸಚಿವರು ಬಂದು ನನ್ನನ್ನು ಭೇಟಿಯಾಗಿದ್ದಾರೆ. ಕೆಲವೊಂದು ಭರವಸೆಗಳನ್ನು ಅವರು ನನಗೆ ಕೊಟ್ಟಿದ್ದಾರೆ. ಆದರೆ ನನಗೆ ಅವರ ಭರವಸೆಗಳಲ್ಲಿ ವಿಶ್ವಾಸವಿಲ್ಲ” ಎಂದು ಅಣ್ಣಾ ಹೇಳಿದರು.
“ಸರಕಾರದೊಂದಿಗೆ ನಾನು ಚರ್ಚೆ ನಡೆಸುತ್ತೇನೆ; ಆದರೆ ಸರಕಾರ ತನ್ನ ಸ್ಪಷ್ಟ ಯೋಜನೆಯೊಂದಿಗೆ ಬರುವ ತನಕ ನನ್ನ ಆಮರಣ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತೇನೆ’ ಎಂದು ಅಣ್ಣಾ ಹೇಳಿದರು.