ನವದೆಹಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೆಹಲಿ ಚಲೋ ಪ್ರತಿಭಟನೆಗೆ ಮುಂದಾಗಿರುವ ರೈತರನ್ನು ಜೈಲಿಗೆ ಹಾಕುವುದು ತಪ್ಪು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ:Team India; ಕೆಎಲ್ ರಾಹುಲ್ ವಿರುದ್ಧ ಕಿಡಿಕಾರಿದ ಬಿಸಿಸಿಐ: ಕಾರಣ ಇಲ್ಲಿದೆ
ಮಂಗಳವಾರ(ಫೆ.13) ಪಂಜಾಬ್, ಹರ್ಯಾಣದಿಂದ ರಾಜಧಾನಿ ದೆಹಲಿಯತ್ತ ಸಾವಿರಾರು ಮಂದಿ ರೈತರು ದೆಹಲಿ ಚಲೋ ಪ್ರತಿಭಟನೆ ಹಿನ್ನೆಲೆಯಲ್ಲಿ ಆಗಮಿಸುತ್ತಿದ್ದು, ಏತನ್ಮಧ್ಯೆ ದೆಹಲಿಯ ಬವಾನಾ ಸ್ಟೇಡಿಯಂ ಅನ್ನು ಜೈಲನ್ನಾಗಿ ಪರಿವರ್ತಿಸಬೇಕೆಂಬ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಆಪ್ ಸರ್ಕಾರ ತಳ್ಳಿಹಾಕಿದ ನಂತರ ಕೇಜ್ರಿವಾಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಮವಾರ ಕೇಂದ್ರ ಸರ್ಕಾರ, ಫೆ,13ರಂದು ರೈತರ ದೆಹಲಿ ಚಲೋ ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ ಬವಾನಾ ಸ್ಟೇಡಿಯಂ ಅನ್ನು ತಾತ್ಕಾಲಿಕವಾಗಿ ಜೈಲನ್ನಾಗಿ ಪರಿವರ್ತಿಸಬೇಕೆಂದು ಕೋರಿ ಪತ್ರ ಬರೆದಿತ್ತು.
ರೈತರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಂತಿಯುತವಾಗಿ ಧರಣಿ ನಡೆಸಲು ಪ್ರತಿಯೊಬ್ಬ ನಾಗರಿಕನಿಗೂ ಹಕ್ಕಿದೆ ಎಂದು ಆಪ್ ಪ್ರತಿಕ್ರಿಯೆ ನೀಡಿದೆ. ರೈತರು ದೇಶದ ಅನ್ನದಾತರಾಗಿದ್ದಾರೆ. ಹೀಗಾಗಿ ಅನ್ನದಾತರನ್ನು ಜೈಲಿನಲ್ಲಿಡುವುದು ತಪ್ಪು ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ.
ಭಾರೀ ಪ್ರಮಾಣದಲ್ಲಿ ದೆಹಲಿಯತ್ತ ರೈತರು ಟ್ರ್ಯಾಕ್ಟರ್ ಗಳಲ್ಲಿ ಆಗಮಿಸುತ್ತಿದ್ದು, ದೆಹಲಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಬ್ಬಿಣದ ತಡೆಬೇಲಿಯನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಳವಳಡಿಸಲಾಗಿದೆ ಎಂದು ವರದಿ ಹೇಳಿದೆ.
ರೈತರ ದೆಹಲಿ ಚಲೋ ಹಿನ್ನೆಲೆಯಲ್ಲಿ ಸಿಂಘು, ಟಿಕ್ರಿ ಮತ್ತು ಘಾಜಿಪುರ್ ಗಡಿಯಲ್ಲಿ ಪೊಲೀಸ್, ಅರೆಸೇನಾಪಡೆ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ವರದಿ ವಿವರಿಸಿದೆ.