ಬೆಂಗಳೂರು: ಕೋರಮಂಗಲ ಸುತ್ತಮುತ್ತಲ ಭಾಗಗಳಲ್ಲಿ ನಡುರಾತ್ರಿ ಪಬ್‌ಗಳ ಗದ್ದಲದ ಕಿರಿಕಿರಿಯಿಂದ ಸಾರ್ವಜನಿಕರಿಗೆ ಮುಕ್ತಿ ದೊರೆತಿಲ್ಲ. ಪಬ್ ಗದ್ದಲದ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಹೈಕೋರ್ಟ್ ಹಲವು ಬಾರಿ ತಾಕೀತು ಮಾಡಿದ ಬಳಿಕ ಕೋರಮಂಗಲ ಪೊಲೀಸರು ಎಚ್ಚೆತ್ತುಕೊಂಡಿದ್ದು, ಎರಡನೇ ದಿನದ ಅಂತರದಲ್ಲಿ ನಿಗದಿತ ಸಮಯದ ಬಳಿಕವೂ ಗದ್ದಲ ಮುಂದುವರಿಸಿದ್ದ ಪಬ್‌ಗಳಿಗೆ ಬಿಸಿಮುಟ್ಟಿಸಿದ್ದಾರೆ.
ಆ.9ರಂದು ರಾತ್ರಿ 12ಗಂಟೆ ಬಳಿಕವೂ ಐದನೇ ಬ್ಲಾಕ್‌ನಲ್ಲಿರುವ ಗ್ಯಾಸ್ಟ್ರೋ ಪಬ್ ಆಂಡ್ ರೆಸ್ಟೋರೆಂಟ್‌ನಲ್ಲಿ ಸಂಗೀತದ ಅಬ್ಬರ, ಮೋಜು ಮಸ್ತಿಯ ಗದ್ದಲ ಜೋರಾಗಿತ್ತು. ಗದ್ದಲದ ಕಿರಿಕಿರಿಯಿಂದ ಬೇಸತ್ತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕೋರಮಂಗಲ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶ್ಯಾಮ್, ಮ್ಯೂಸಿಕ್ ಪಾರ್ಟಿ ಸ್ಥಗಿತಗೊಳಿಸಿದ್ದಾರೆ. ಬಳಿಕ ದಾಖಲೆಗಳನ್ನು ಪರಿಶೀಲಿಸಿದಾಗ ಅನುಮತಿ ಇಲ್ಲದೆ ನಿಗದಿತ ಅವಧಿ ಪೂರ್ಣಗೊಂಡ ಬಳಿಕವೂ ಪಾರ್ಟಿ ನಡೆಸುತ್ತಿರುವುದು ಕಂಡು ಬಂದಿದೆ. ಹೀಗಾಗಿ, ಪಬ್ ಸಿಬ್ಬಂದಿ ಶೇಖ್ ಶಹನವಾಜ್ ಹುಸೇನ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾರನೇ ದಿನ (ಆ.10ರಂದು) ತಡರಾತ್ರಿ 12ಗಂಟೆ ಬಳಿಕವೂ ನಾಲ್ಕನೇ ಬ್ಲಾಕ್‌ನಲ್ಲಿರುವ ಚೀಯರ್ಸ್ ಪಬ್ ಆಂಡ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿಯ ಗದ್ದಲ ಮಿತಿಮೀರಿತ್ತು. ಪರಿಣಾಮ ಅಕ್ಕ-ಪಕ್ಕದ ನಿವಾಸಿಗಳು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಪಾರ್ಟಿ ಸ್ಥಗಿತಗೊಳಿಸಿ, ಅನುಮತಿಯಿಲ್ಲದೆ ಮ್ಯೂಸಿಕ್ ಪಾರ್ಟಿ ನಡೆಸಿದ ಪಬ್ ಮ್ಯಾನೇಜರ್ ಪ್ರಬೀಶ್ ಗೋರಂಗ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.