ಧಾರವಾಡ: ರಾಜ್ಯದ ಜನರಿಗೆ ವಿಧಾನಸಭೆ ಚುನಾವಣೆ ಕುರಿತು ಕುತೂಹಲ ಎಷ್ಟಿದೆಯೋ ಗೊತ್ತಿಲ್ಲ. ಆದರೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಬಗ್ಗೆ ಮಾತ್ರ ಇಲ್ಲಿನ ಸಾಹಿತ್ಯ ವಲಯದಲ್ಲಿ ಹೆಚ್ಚಿನ ಕುತೂಹಲ ಮೂಡಿದೆ.
ಇದಕ್ಕೆ ಪ್ರಮುಖ ಕಾರಣ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅವರು ತಮ್ಮ 98ನೇ ವಯಸ್ಸಿನಲ್ಲಿ ಚುನಾವಣೆ ಅಖಾಡಕ್ಕೆ ಇಳಿದಿರುವುದು ಎನ್ನಲಾಗಿದೆ. ಸತತ 51 ವರ್ಷಗಳ ಕಾಲ ಅವರು ಕವಿಸಂ ಅಧ್ಯಕ್ಷರಾಗಿ ಆಯ್ಕೆಯಾಗುತ್ತ ಬಂದಿದ್ದಾರೆ. 50 ವರ್ಷಗಳಲ್ಲಿ ನಡೆದ 17 ಚುನಾವಣೆಗಳನ್ನು ಎದುರಿಸಿದ್ದರೂ 2015ರ ಚುನಾವಣೆಯಲ್ಲಿ ಮಾತ್ರ ಪಾಪು ಅವರಿಗೆ ಎದುರಾಳಿಗಳು ಪ್ರಬಲ ಸ್ಪರ್ಧೆ ಒಡ್ಡಿದ್ದರು.
ಅದನ್ನು ಬಿಟ್ಟರೆ, ಎಲ್ಲಾ ಚುನಾವಣೆಗಳಲ್ಲೂ ಡಾ|ಪಾಪು ಹೆಚ್ಚು ಕಡಿಮೆ ಅವಿರೋಧವಾಗಿಯೇ ಆಯ್ಕೆಯಾಗಿದ್ದಾರೆ. ಆದರೆ ಈ ಬಾರಿಯ ಕವಿಸಂ ಚುನಾವಣೆ ಘೋಷಣೆ ಮುಂಚೆಯೇ ಅವರು ತಮ್ಮ ಹಳೆಯ ಸ್ನೇಹಿತರ ಗುಂಪಿಗೆ ಟಾಟಾ ಹೇಳಿದ್ದು, ಕೆಲ ಸಾಹಿತಿಗಳಲ್ಲಿ ಅಸಮಾಧಾನ ಹುಟ್ಟು ಹಾಕಿದೆ. 3 ವರ್ಷಗಳ ಕಾಲ ಪಾಪು ಅವರನ್ನು ಬೆಂಬಲಿಸಿ ಕೆಲಸ ಮಾಡಿದರೂ ಇನ್ನೊಂದು ಹೊಸ ಗುಂಪನ್ನು ಪಾಪು ರಚಿಸಿಕೊಂಡಿದ್ದಾರೆ ಎನ್ನುವ ಆರೋಪ ಇದೀಗ ಪಾಪು ಅವರ ವಿರುದ್ಧ ಸಾಂಸ್ಕೃತಿಕ ರಾಜಕಾರಣದ ಕಹಳೆ ಮೊಳಗಲು ಪ್ರಮುಖ ಕಾರಣ ಎನ್ನಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಹನುಮಾಕ್ಷಿ ಗೋಗಿ, ಮಹದೇವ ಸಿದ್ನಾಳ, ಮಂಜುನಾಥ ಹೆಗಡೆ, ರಾಚಯ್ಯ ತಿಮ್ಮಾಪೂರ ಅವರು ಕಣದಿಂದ ಹಿಂದಕ್ಕೆ ಸರಿದು ಇದೀಗ ಚೆನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜು, ಮಾಚಕನೂರ ಸೇರಿ ಪ್ರಮುಖರ ನೇತೃತ್ವದಲ್ಲಿ ಬಿ.ಎಸ್.ಶಿರೋಳ ಬೆಂಬಲಕ್ಕೆ ನಿಂತಿರುವುದು ಪಾಪು ಅವರಿಗೆ ನುಂಗಲಾರದ ತುತ್ತಾಗಬಹುದು.
ತೆರೆಯಲ್ಲಿ ನಡೆದಿದ್ದೇನು?: ಹುಬ್ಬಳ್ಳಿಯ ರಿಕ್ರಿಯೇಷನ್ ಕ್ಲಬ್ ಪ್ರಕರಣದಲ್ಲಿ ಪಾಪು ಅವರು ನೇರವಾಗಿ ಜಿಲ್ಲೆಯ ಕೆಲವು ಬಿಜೆಪಿ ರಾಜಕಾಣಿಗಳ ವಿರುದ್ಧ ಹರಿಹಾಯ್ದಿದ್ದರಿಂದ 2015ರ ಕವಿಸಂ ಚುನಾವಣೆಯಲ್ಲಿ ಪಾಪು ಸೋಲಿಸಲು ಬಿಜೆಪಿ ಹೆಣಗಾಟ ನಡೆಸಿದ್ದು ಸುಳ್ಳಲ್ಲ. ಕವಿವಿಯ ಸಂಗೀತ ವಿಭಾಗದ ಪ್ರಾಧ್ಯಾಪಕ ಡಾ|ಮೃತ್ಯುಂಜಯ ಅಗಡಿ ಅವರನ್ನು ಪಾಪು ವಿರುದ್ಧ ಕಣಕ್ಕಿಳಿಸಿತ್ತು ಕಮಲ ಪಾಳೆಯ. ಆದರೆ ಈ ಸಂದರ್ಭ ಧಾರವಾಡದ ಸಾಹಿತ್ಯ ವಲಯವೆಲ್ಲವೂ ಸೇರಿ ಪಾಪು ಬೆಂಬಲಕ್ಕೆ ನಿಂತು ಗೆಲುವಿಗೆ ಕಾರಣವಾಗಿತ್ತು.
ಈ ಬಾರಿ ತಮ್ಮ ಹಳೆಯ ಬಳಗವನ್ನು ಕೈ ಬಿಟ್ಟು ಇನ್ನೊಂದು ಗುಂಪು ಕಟ್ಟಿಕೊಂಡು ಯಾರು ಯಾವ ಹುದ್ದೆಗೆ ನಿಲ್ಲಬೇಕು ಎನ್ನುವುದನ್ನು ನೇರವಾಗಿ ಮಾಧ್ಯಮಗಳಿಗೆ ಡಾ|ಪಾಪು ಪ್ರಕಟಿಸಿಬಿಟ್ಟರು. ಇದು ಅವರೊಂದಿಗೆ ಕೆಲಸ ಮಾಡಿದ ಇತರರಿಗೆ ನೋವುಂಟು ಮಾಡಿದೆ. ಹೀಗಾಗಿ ಈ ಬಾರಿ ಕವಿಸಂ ಚುನಾವಣೆಯಲ್ಲಿ ಸಾಹಿತಿಗಳೆಲ್ಲರೂ ಅಖಾಡಕ್ಕೆ ಇಳಿಯುವುದು ನಿಶ್ಚಿತವಾಗಿದೆ.
ಈ ಬಾರಿ ಡಾ.ಎಂ.ಎಂ.ಕಲಬುರ್ಗಿ ಅವರ ಅನುಪಸ್ಥಿತಿ ಅವರ ಬೆಂಬಲಿಗ ಸಾಹಿತಿಗಳಿಗೆ ಕಾಡುತ್ತಿದ್ದು, ಒಗ್ಗಟ್ಟು ಪ್ರದರ್ಶನವೂ ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಡಾ|ಗಿರಡ್ಡಿ , ಕಣವಿ ಅವರಂಥ ಹಿರಿಯ ಸಾಹಿತಿಗಳೇ ಪಾಪು ವಿರುದ್ಧ ನೇರವಾಗಿ ತೊಡೆ ತಟ್ಟಿರುವುದರಿಂದ ಪಾಪು ಗೆಲುವು ಇನ್ನಷ್ಟು ಕಷ್ಟವಾಗುವ ಸಾಧ್ಯತೆ ಇದೆ.
– ಬಸವರಾಜ ಹೊಂಗಲ್