Advertisement
ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಕಂಬಳದ ಬಗ್ಗೆ ಉದಯವಾಣಿ ಜೊತೆ ಗುಣರಂಜನ್ ಶೆಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Related Articles
Advertisement
ಎಷ್ಟೋ ಜನಕ್ಕೆ ಕಂಬಳ ವೀಕ್ಷಿಸುವ ಕುತೂಹಲ ವಿದೆ. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕೆಲಸದ ಒತ್ತಡಗಳ ನಡುವೆ ಬಸ್ಸು, ಕಾರು, ವಿಮಾನದಲ್ಲಿ ಹೋಗಿ ನೋಡಿ ಕೊಂಡು ಬರಲು ಕಷ್ಟವಾಗುತ್ತದೆ. ಕೆಲವು ಊರು ಗಳಲ್ಲಿ ಆ ರೀತಿಯ ವ್ಯವಸ್ಥೆ ಇರುವುದಿಲ್ಲ. ಕರಾವಳಿಯ ಭಾಗದ 18 ಲಕ್ಷ ಮಂದಿ ಬೆಂಗಳೂರಿನಲ್ಲಿ ನೆಲೆಸಿರುವುದನ್ನು ಗಮನ ದಲ್ಲಿಟ್ಟುಕೊಂಡು ಕಂಬಳ ಆಯೋಜನೆ ಮಾಡಿದ್ದೇವೆ.
ಕಂಬಳದಲ್ಲಿ ಕೋಣಗಳಿಗೆ ಬಹಳಷ್ಟು ಹಿಂಸೆ ಕೊಡಲಾಗುತ್ತದೆ ಎಂಬ ಆರೋಪಕ್ಕೆ ನೀವು ಏನು ಹೇಳುತ್ತೀರಿ ?
ಕಂಬಳ ನಡೆಸಲು ಸುಪ್ರೀಂಕೋರ್ಟ್ ಮಾರ್ಗಸೂಚಿ ಇದೆ. ಕಾನೂನು ಎಲ್ಲರೂ ಪಾಲಿಸಬೇಕು. ನಮಗೆ ಕೋಣಗಳ ಮೇಲೆ ಅತಿಯಾದ ಪ್ರೀತಿ ಇದೆ. ನಮ್ಮ ಕಂಬಳ ಕಮಿಟಿಯವರು ಕೋಣಗಳಿಗೆ ಹಿಂಸೆಯಾಗದ ರೀತಿಯಲ್ಲಿ ಕಂಬಳ ನಡೆಸುತ್ತಿದ್ದಾರೆ.
ಬೆಂಗಳೂರು ಕಂಬಳದ ಬಗ್ಗೆ ನೀವು ಏನೆಲ್ಲಾ ನಿರೀಕ್ಷೆ ಇಟ್ಟುಕೊಂಡಿದ್ದೀರಿ ?
ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ಧೈರ್ಯ ತೆಗೆದುಕೊಂಡು ಬೆಂಗಳೂರಿನಲ್ಲಿ ಕಂಬಳ ಮಾಡಲು ಹೊರಟಿದ್ದೇವೆ. ಅಶೋಕ್ ರೈ ಅವರ ಕಾರ್ಯಕ್ಕೆ ಮೊದಲು ಮೆಚ್ಚುಗೆ ಸಲ್ಲಿಸಬೇಕು. ಇದರಲ್ಲಿ ಹಲವಾರು ಜನರು ಶ್ರಮ ಪಟ್ಟು ಕೆಲಸ ಮಾಡುತ್ತಿದ್ದಾರೆ. ಜನ ಕಂಬಳ ವೀಕ್ಷಿಸಿ ಸಂಭ್ರಮಿಸುತ್ತಾರೆ ಎಂಬ ನಂಬಿಕೆ ಇದೆ.
ಬೆಂಗಳೂರು ಕಂಬಳದಲ್ಲಿ ನಿಮ್ಮ ಪ್ರಕಾರ ಕರಾವಳಿ ಸೊಗಡು ನಿರೀಕ್ಷಿಸಬಹುದೇ ?
ಕರಾವಳಿ ಭಾಗದಲ್ಲಿ ಕಂಬಳದ ವೇಳೆ ನಿರ್ಮಿಸುವ ಮಾದರಿಯ ಕೆರೆ ನಿರ್ಮಿಸಿದ್ದೇವೆ. ಮೈಸೂರು ಮಹಾರಾಣಿಯವರ ಕೃಪೆಯಿಂದ ಬೆಂಗಳೂರಿನ ಹೃದಯ ಭಾಗದಲ್ಲಿ ನಮಗೆ ಕೊಟ್ಟಿರುವ ಜಾಗಕ್ಕೆ ತುಳುನಾಡಿನ ವಾತಾವರಣವನ್ನು ತಂದಿದ್ದೇವೆ. ಕರಾವಳಿ ಭಾಗದಲ್ಲಿರುವ ಮೈಕ್ ಅನೌನ್ಸ್‌ಮೆಂಟ್ ಗಳು, ಆಹಾರ ಮಳಿಗೆಗಳು ಸೇರಿದಂತೆ ಎಲ್ಲವೂ ಊರಿನ ಕಂಬಳದಂತೆ ಆಯೋಜಿಸಿದ್ದೇವೆ. ಒಟ್ಟಾರೆ ಉತ್ಸವದ ಮಾದರಿಯ ವಾತಾವರಣ ಸೃಷ್ಟಿಮಾಡಿದ್ದೇವೆ. ಕರಾವಳಿ ಸೊಗಡನ್ನು ಜನ ಇಲ್ಲಿ ಸವಿಯಬಹುದು. ಲಕ್ಷಾಂತರ ಜನರು ತಮ್ಮ ಕುಟುಂಬಸ್ಥರೊಂದಿಗೆ ಯಾವುದೇ ತೊಂದರೆ ಆಗದಂತೆ ಕಂಬಳ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದೇವೆ.
ಮುಂದಿನ ದಿನಗಳಲ್ಲಿ ಕಂಬಳವು ಉದ್ಯಮದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆಯೇ?
ದೈವ, ದೇವರ ಆರಾಧನೆ ಹಲವಾರು ಜಾಗಕ್ಕೆ ಹರಡಿಕೊಂಡಿದೆ. ಅದು ಉದ್ಯಮ ಸ್ವರೂಪ ಪಡೆದುಕೊಳ್ಳುವುದಿಲ್ಲ. ನಮ್ಮ ಸಂಸ್ಕೃತಿ ಬೆಳೆಯುತ್ತದೆ. ಕಂಬಳವನ್ನು ಪೂಜ್ಯ ಭಾವನೆಯಲ್ಲಿ ನೋಡುತ್ತಿದ್ದಾರೆ. ಇದನ್ನು ಉದ್ಯಮ ಮಾಡಲು ಆಗುವುದಿಲ್ಲ. ಕೋಣಗಳನ್ನು ಸಾಕುವವರಿಗೆ ದುಡ್ಡು ಬರುವುದಿಲ್ಲ. ಗೌರವ, ಮನೆತನ, ಪ್ರತಿಷ್ಠೆಗಾಗಿ ಅಷ್ಟೆ ಕೋಣಗಳ ಮಾಲೀಕರು ಆಸಕ್ತಿಯಿಂದ ಕಂಬಳದಲ್ಲಿ ಪಾಲ್ಗೊಳ್ಳುತ್ತಾರೆ. ಇದನ್ನು ಉದ್ಯಮ ಮಾಡಲು ಹೊರಟರೆ ವೈಫಲ್ಯವಾಗ ಬಹುದು.
ಕಂಬಳದಲ್ಲಿ ಜನರಿಗೆ ಹಾಗೂ ಕಂಬಳ ನೋಡಿಕೊಳ್ಳುವವರಿಗೆ ಯಾವೆಲ್ಲಾ ಸೌಲಭ್ಯ ಒದಗಿಸಿದ್ದೀರಿ ? ಜನರು ಒಮ್ಮೆ ಕಂಬಳಕ್ಕೆ ಎಂಟ್ರಿ ಕೊಟ್ಟರೆ, ತಂದೆಗೆ ಮಾತ್ರ ಕಂಬಳ ನೋಡುವ ಆಸಕ್ತಿಯಿದ್ದರೆ, ತಾಯಿ-ಮಕ್ಕಳಿಗೆ ಆಹಾರ ಮಳಿಗೆ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಬಹುದು. ವಯಸ್ಸಾದವರಿಗೆ ನಡೆದುಕೊಂಡು ಬರಲು ಕಷ್ಟವಾಗದಂತೆ ಮಗ್ಗೀಸ್ ವಾಹನ ಸೌಲಭ್ಯವಿದೆ. ಪ್ರಾಣಿವೈದ್ಯರು, ವೈದ್ಯರು, ಐಸಿಯು ವ್ಯವಸ್ಥೆ ಕಲ್ಪಿಸಲಾಗಿದೆ. ಕೋಣಗಳನ್ನು ನೋಡಿಕೊಳ್ಳಲು ನಾಟಿ ವೈದ್ಯರು ಊರಿನಿಂದಲೇ ಬಂದಿದ್ದಾರೆ. ಸಣ್ಣ ಗಾಯದಿಂದ ಹಿಡಿದು ಏನಾದರೂ ಆದರೂ ಕೂಡಲೇ ಚಿಕಿತ್ಸೆಗೆ ವ್ಯವಸ್ಥೆಗಳಿವೆ.
ಬೆಂಗಳೂರು ಕಂಬಳದ ಬಗ್ಗೆ ಸಾರ್ವಜನಿಕರಿಗೆ ಏನು ಹೇಳಲು ಬಯಸುತ್ತೀರಿ ? ಬೆಂಗಳೂರು ಕಂಬಳ ಐತಿಹಾಸಿಕ ಕ್ಷಣವಾಗಿದ್ದು, ಈ ಅವಕಾಶವನ್ನು ಯಾರೂ ಬಿಡಬೇಡಿ. ಬನ್ನಿ ಭಾಗವಹಿಸಿ. ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಬಹುತೇಕ ಎಲ್ಲ ಇಲಾಖೆಗಳಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಿ ಅಚ್ಚುಕಟ್ಟಾಗಿ ಕಂಬಳ ಆಯೋಜಿಸುತ್ತೇವೆ. ಬನ್ನಿ ಭಾಗವಹಿಸಿ. ಎಲ್ಲರಿಗೂ ಕಂಬಳಕ್ಕೆ ಆದರದ ಸ್ವಾಗತ.