Advertisement
ಇಂತಹ ಹನುಮನ ಸಕಲ ಗುಣಗಳನ್ನೂ ಎರವಲಾಗಿ ಪಡೆದು, ಪರೀಕ್ಷೆಯಲ್ಲಿ ತಲೆಗೆ ಹೊಳೆದಿದ್ದನ್ನೆಲ್ಲ ಉತ್ತರವೆಂದು ಬರೆದು ಪಾಮರರಾಗುವ ನಮ್ಮಂತಹ ವಿದ್ಯಾರ್ಥಿಗಳ ಪಾಡು ಹೆಚ್ಚು-ಕಮ್ಮಿ ಸಂಜೀವಿನಿ ವೃತ್ತಾಂತವನ್ನೇ ಹೋಲುತ್ತದೆಯೆಂದರೂ ತಪ್ಪಿಲ್ಲ !
Related Articles
Advertisement
ಇವೆಲ್ಲದರ ಮಧ್ಯೆ ನಮ್ಮಂತಹ ಪ್ರಕಾಂಡ ಪಂಡಿತರ ದಾಳಿಗೆ ತುತ್ತಾಗಿ ವಿಜಯನಗರ ಸಾಮ್ರಾಜ್ಯ, ಬಹಮನಿ ಸಾಮ್ರಾಜ್ಯ, ಖೀಲ್ಜಿ ಸಾಮ್ರಾಜ್ಯವೆಲ್ಲ ಸ್ಥಾನಪಲ್ಲಟ, ಕಾಲ ಪಲ್ಲಟಗೊಂಡುಬಿಡುತ್ತಿದ್ದವು.
ಮೇಷ್ಟ್ರು, ನಮ್ಮ ಉತ್ತರಪತ್ರಿಕೆ ರಾತ್ರಿಯಿಡೀ ಓದಿ ಬೆಪ್ಪಾದ ಕೂಚುಭಟ್ಟರ ಹಾಗೆ ಕೆಂಪು ಕಣ್ಣುಗಳೊಂದಿಗೆ ಕ್ಲಾಸಿಗೆ ಬಂದು ತೊಂಡೆಕಾಯಿ ತಿಂದು ನಾಲಿಗೆ ದಪ್ಪ ಆದವರಂತೆ ಇಸ್ವಿಗಳನ್ನೆಲ್ಲ ಹೇಳುವಾಗ ಎಂದು ತೊದಲತೊಡಗುತ್ತಿದ್ದೆವು. ನಮ್ಮ ತಡೆಯಲಾರದ ಈ ಉಪಟಳಕ್ಕೆ ನಮ್ಮ ಶಾಲೆಯಲ್ಲಿ ಪ್ರಶ್ನೆಪತ್ರಿಕೆಯ ಸ್ವರೂಪವನ್ನೇ ಬದಲಾಯಿಸಿ ಒಂದು ಅಂಕದ ಪ್ರಶ್ನೆಗೂ ಸಂಕ್ಷಿಪ್ತವಾಗಿ ಬರೆಯಿರಿ ಅಂತ ನಮೂದಿಸುವ ಹೊಸ ಪದ್ಧತಿಯನ್ನೇ ಶುರುಮಾಡಲಾಯಿತು!
ಹುಟ್ಟುಗುಣ ಕಾಲೇಜಿನ ಮೆಟ್ಟಿಲು ಹತ್ತಿದಾಕ್ಷಣ ಬಿಟ್ಟು ಹೋಗುತ್ತದೆಯೆ? ನಮ್ಮಂತೆಯೇ ಗಿಡವಾಗಿ ಬಗ್ಗದ ಮರಗಳಿಗೆ, ಬಗ್ಗುವುದು ಮತ್ತು ನಿಗುರುವುದನ್ನು ಕಲಿಸುತ್ತೇವೆಂದು ಪಣ ತೊಟ್ಟ ನಮ್ಮ ಕಾಲೇಜಿನ ಪ್ರೊಫೆಸರುಗಳು ಏನೋ ಒಂದು ನಿರ್ಧಾರಕ್ಕೆ ಬಂದಿದ್ದರೆಂದು ಕಾಣುತ್ತದೆ.
ಪ್ರತಿದಿನ ಮೊದಲ ಬೆಂಚಿನಲ್ಲಿ ಕುಳಿತು, ಕೊಕ್ಕರೆಯಂತೆ ಕುತ್ತಿಗೆ ಉದ್ದ ಮಾಡಿ ಪಾಠ ಕೇಳುತ್ತಿದ್ದ ಹುಡುಗಿ ಸಿಕ್ಕಾಪಟ್ಟೆ ಜಾಣೆ ಎಂದು ಪ್ರಸಿದ್ಧಿಯಲ್ಲಿದ್ದಳು. ಮೊದಮೊದಲು ಕ್ಲಾಸಿನಲ್ಲಿ ಮುಂದೆ ಕುಳ್ಳಲಿ, ಹಿಂದೆ ಕುಳ್ಳಲಿ ಪ್ರೊಫೆಸರ್ ಮಾಡುವ ಪಾಠ ಎಲ್ಲರಿಗೂ ಒಂದೇ ಎಂದು ಅವಳಿಗೆ ಸೊಪ್ಪು ಹಾಕದ ನಾವು, ಆ ಹುಡುಗಿ ತನ್ನ ಮೂಗಿನ ಮೇಲೆ ಏರಿಸಿಕೊಂಡು ಬರುತ್ತಿದ್ದ ದಪ್ಪ ಕನ್ನಡಕದಿಂದಾಗಿ ನಮಗೂ ನಮ್ಮ ನಿಲುವಿನ ಮೇಲೆ ಸಂಶಯ ಮೂಡುವಂತಾಗಿತ್ತು.
ಒಂದು ದಿನ ನಾವೆಲ್ಲ ಕ್ಲಾಸಿಗೆ ಬರುವುದನ್ನೇ ಕಾಯುತ್ತಿದ್ದ ಪ್ರೊಫೆಸರ್, ಆ ಹುಡುಗಿಯ ಉತ್ತರಪತ್ರಿಕೆಯನ್ನು ನಮ್ಮ ಕೈಯಲ್ಲಿಡುತ್ತ, ಅವಳ ಉತ್ತರ ಬರೆಯುವ ಶೈಲಿಯನ್ನು ಸೂಕ್ಷ್ಮವಾಗಿ ನೋಡಿ, ನಿಮಗೇ ನಿಮ್ಮ ತಪ್ಪಿನ ಅರಿವಾಗುತ್ತದೆ ಎಂದು ನಮ್ಮ ತಪ್ಪನ್ನು ನಾವೇ ಕಂಡು ಹಿಡಿದುಕೊಳ್ಳುವ ಮಹಾನ್ ಜವಾಬ್ದಾರಿಯನ್ನು ನಮ್ಮ ಹೆಗಲಿಗೆ ಒರೆಸಿದರು.
ನಾವೂ ಪ್ರೊಫೆಸರ್ ಹೇಳಿದ್ದು ಸರಿ ಇದ್ದಿರಲೂಬಹುದೆಂದು ಪತ್ರಿಕೆಯನ್ನು ಕಮಚಿ ಮಗುಚಿ ನೋಡಿದ್ದೇ ನೋಡಿದ್ದು. ಈ ಚಿತ್ರವಿಚಿತ್ರ ಜಗತ್ತಿನಲ್ಲಿ ಹುಡುಕಿದರೆ ದೇವರೂ ಸಿಗಬಹುದಂತೆ. ಆದರೆ ನಮ್ಮ ನಮ್ಮ ತಪ್ಪುಗಳು ಮಾತ್ರ ಸಿಕ್ಕ ಉದಾಹರಣೆಗಳಿಲ್ಲ ಎಂಬುದು ಹಿರಿಯರ ಅನುಭವ. “ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬಂತೆ ನಮ್ಮ ಉತ್ತರಪತ್ರಿಕೆಯೆದುರು ಅವಳ ಉತ್ತರಪತ್ರಿಕೆ ನಮಗೆ ಬಿಲ್‌ಕುಲ್ ಇಷ್ಟವಾಗಲಿಲ್ಲ. ಮೊಳಕಾಲೂ ಮುಚ್ಚದ ಸ್ಕರ್ಟಿನಂತೆ ಉತ್ತರವೆಲ್ಲ ಶುರುವಾಗುತ್ತಿದ್ದಂತೆಯೇ ಮುಗಿದುಹೋಗುತ್ತಿತ್ತು. ಇಂತಹ ಮಿನಿ ಉತ್ತರಗಳಿಗೆ ಫುಲ್‌ಮಾರ್ಕ್ಸ್ ಹೇಗೆ ಸಿಗುತ್ತದೆಯೆಂದು ಅರಿವಿಗೆ ಬಾರದೆ ನಮ್ಮ ಸಮಸ್ಯೆ ಇನ್ನೂ ಗೋಜಲಾಗಿ ಹೋಯಿತು.
ಈ ಘಟನೆಯ ನಂತರ ನಮ್ಮ ಪ್ರೊಫೆಸರುಗಳಿಗೆ ದೊಡ್ಡ ಉತ್ತರ ಓದಲು ಆಲಸ್ಯ ಎಂಬ ನಿರ್ಣಯಕ್ಕೆ ನಾವೆಲ್ಲರೂ ಬಂದುಬಿಟ್ಟಿದ್ದೆವು.
ಹತ್ತು ನಿಮಿಷದ ಸೆಮಿನಾರ್‌ಗೆ ಮೂವತ್ತೈದು ಪೇಜು ತುಂಬಿಸಿಕೊಂಡು ಬರುತ್ತಿದ್ದ ನಮಗೆ, “ಸಂಕ್ಷಿಪ್ತವಾಗಿ ಬರೆಯೋದು ಕಲತ್ಕೊàರಿ, ಇಡೀ ಬುಕ್ಕೇ ಕಾಪಿ ಮಾಡ್ಕೊಂಡು ಬಂದೀರಲಿ’ ಅಂತ ನಮ್ಮ ಪ್ರೊಫೆಸರು ಯಾರೂ ಒಲ್ಲದ ಅಂಕವನ್ನು ಕೊಟ್ಟು ದಾನಿಗಳಂತೆ ಬೀಗುತ್ತಿದ್ದರು. ನಮ್ಮ ಅಂಕಗಳ ಬಗ್ಗೆ ನಮಗಿಂತಲೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದ, ನಮ್ಮ ಕಣ್ಣಿಗೆ ಕಾಣುವ ದೇವರನ್ನು ಸಂತೈಸುವುದು ನಮಗೆ ಇದೆಲ್ಲಕ್ಕಿಂತಲೂ ಕಷ್ಟವಾಗುತ್ತಿತ್ತು.
ನಿರೀಕ್ಷಿತ ಅಂಕ ದೊರೆಯಲಿಲ್ಲ ಎಂಬ ಬೇಸರ ನಮಗಿರಲಿಲ್ಲ ಎಂದುಕೊಂಡರೆ ಅದು ಖಂಡಿತ ತಪ್ಪು! ಒಂದು ಕೈ ನೋಡೇ ಬಿಡುವಾ ಎಂದು ಉತ್ತರವನ್ನು ಸಂಕ್ಷಿಪ್ತವಾಗಿ ಬರೆಯಲು ಬಹಳ ಪ್ರಯತ್ನವನ್ನು ಮಾಡಿದ್ದೆವು. ಪ್ರಯತ್ನ ಮಾಡಿದಾಗೆಲ್ಲ ನಮ್ಮ ಉತ್ತರಪತ್ರಿಕೆಯನ್ನು ಓದಿದ ನಮ್ಮ ಪ್ರೊಫೇಸರ್, “ಪ್ರಶ್ನೆಗೂ ಉತ್ತರಕ್ಕೂ ಯಾವೂರಿನ ಸಂಬಂಧವೂ ಇಲ್ವಲಿ, ಮೊದಲು ಪ್ರಶ್ನೆ ಅರ್ಥ ಮಾಡಿಕೊಳ್ಳೋದನ್ನ ಕಲೀರಿ’ ಅಂತ ಕಡ್ಡಿ ತುಂಡು ಮಾಡುವಂತೆ ಹೇಳಿಬಿಟ್ಟರು. ನಮಗೋ ಉಭಯ ಸಂಕಟ, ಸಂಕ್ಷಿಪ್ತವಾಗಿ ಬರೆಯಲು ಹೋದರೆ, ಏನೋ ಬರೆಯಲು ಹೋಗಿ ಮತ್ತೇನೋ ಬರೆದು ಉತ್ತರ ತಪ್ಪುತ್ತದೆ, ಉತ್ತರ ತಪ್ಪಾಗಬಾರದೆಂದರೆ ಪ್ರಶ್ನೆಯನ್ನು ಸರಿ ಅರ್ಥ ಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಕೊಟ್ಟಿರುವ ಸಮಯ ಮಿತಿಯಲ್ಲಿ ಪ್ರಶ್ನೆಯನ್ನೇ ಹತ್ತು ಹತ್ತು ಬಾರಿ ಓದಿ ಅರ್ಥ ಮಾಡಿಕೊಳ್ಳುತ್ತ ಕುಳಿತರೆ ಉತ್ತರ ಬರೆಯಲು ಸಮಯವೆಲ್ಲಿ? ಈಗೇನಿದ್ದರೂ ಮನಸ್ಸಿನ ನೆಮ್ಮದಿಗಾಗಿ ಕೆ. ಎಸ್. ನರಸಿಂಹಸ್ವಾಮಿ ಅವರ ಹಿಂದಿನ ಸಾಲಿನ ಹುಡುಗರು ಎಂದರೆ ನಮಗೇನೇನು ಭಯವಿಲ್ಲ ಪದ್ಯವನ್ನು ಬಾರಿ ಬಾರಿಗೂ ಓದಿ ಆನಂದಿಸುವುದೊಂದೇ ಉಳಿದಿರುವ ದಾರಿ.
– ಛಾಯಾ ಭಟ್