Advertisement

ರೈತರಿಗೆ ಹೊಸ ಆದೇಶದ ಬರೆ!

04:59 PM Apr 14, 2020 | mahesh |

ಶಿರಸಿ: ಕೃಷಿಕರಿಗೆ ಸರಕಾರ ಶಾಕ್‌ ನೀಡಿದೆ. ಸಹಕಾರಿ ಸಂಘಗಳ ಮೂಲಕ ರೈತರು ಪಡೆದ ಸಾಲದ ಬಡ್ಡಿ ಮನ್ನಾಕ್ಕೆ ಸಂಬಂಧಿಸಿ ಒಂದು ಕುಟುಂಬಕ್ಕೆ 3 ಲಕ್ಷ ರೂ. ವರೆಗಿನ ಶೂನ್ಯ ಬಡ್ಡಿ ಸಾಲ ಮಿತಿಗೊಳಿಸಿ ಆದೇಶ ಹೊರಡಿಸಿದ್ದು, ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈವರೆಗೆ ಒಬ್ಬ ರೈತನಿಗೆ ಗರಿಷ್ಠ 3 ಲಕ್ಷ ರೂ. ವರೆಗಿನ ಶೂನ್ಯಬಡ್ಡಿ ಸಾಲ ಮಿತಿ ಎಂದಿತ್ತು. ಆದರೆ ಈಗ 3 ಲಕ್ಷ ರೂ. ಮಿತಿಯನ್ನು ಕುಟುಂಬಕ್ಕೆ ಎಂದು ಮಾಡಲಾಗಿದೆ. ಇನ್ನೂ ಪೂರ್ಣವಾಗಿ ದಾಖಲಾಗದ ರೇಶನ್‌ ಕಾರ್ಡ್‌ ಬಳಸಿ ಅದರಲ್ಲಿ ಇರುವವರ ಹೆಸರಿನಲ್ಲಿ ಸಾಲ ಪಡೆದಿದ್ದರೆ ಎಣಿಕೆ ಕ್ರಮದಲ್ಲಿ ಸಾಲದ ಮೇಲಿನ ಬಡ್ಡಿ ಮನ್ನಾ ಸಿಗಲಿದೆ. ಎರಡು ಕುಟುಂಬದ
ಹೆಸರು ರೇಶನ್‌ ಕಾರ್ಡ್‌ನಲ್ಲಿದ್ದರೆ ಅದನ್ನೂ ಒಂದೇ ಕುಟುಂಬ ಎಂದು ಪರಿಗಣಿಸಬೇಕು.

Advertisement

ಇದು ಇನ್ನೊಂದು ರೇಶನ್‌ ಕಾರ್ಡ್‌ ಪಡೆಯುವ ತನಕವು ಹಾಗೆ ಉಳಿಯಲಿದೆ ಎಂದು ಸಹಕಾರ ಇಲಾಖೆ ಮಾ. 31ಕ್ಕೆ (ಸಂಖ್ಯೆ ಸಿಆರಿx ಸಿಎಬಿ1/2/20019-20) ಆದೇಶ ಮಾಡಿದ್ದು, ಉರುಳಾಗಿದೆ. ಹೊಸ ಬೆಳೆಸಾಲ, ಹಳೆ ಸಾಲ ಮರುಪಾವತಿ ಏ. 1ರಿಂದ ಚಾಲ್ತಿಯಲ್ಲಿರಲಿದ್ದು, ಹೊಸ ರೇಶನ್‌ ಕಾರ್ಡ್‌ಗೆ ಕೋವಿಡ್‌-19ರ ಕಾರಣದಿಂದಲಭ್ಯವಾಗುವುದಿಲ್ಲ.

ಈ ಆದೇಶದಿಂದ ಕೂಡು ಕುಟುಂಬಗಳಿಗೆ ದೊಡ್ಡ ಏಟಾಗಲಿದೆ. ಹತ್ತಾರು ಎಕರೆ ಕೃಷಿ ಭೂಮಿ ಇದ್ದು ಬೆಳೆಸಾಲವನ್ನು 3 ಲಕ್ಷಕ್ಕೂ ಮೀರಿ ಪಡೆಯುತ್ತಿದ್ದವರ ಕುಟುಂಬದಲ್ಲಿ ಯಾರಾದರೂ ಒಬ್ಬರು 20 ಸಾವಿರ ರೂ.ಕ್ಕಿಂತ ಅಧಿಕ ಪಗಾರ ಪಡೆಯುತ್ತಿದ್ದರೆ ಬಡ್ಡಿ ಮನ್ನಾ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ. ಕೃಷಿಕರು ಈಗ ಅಕ್ಷರಶಃ ಕಷ್ಟದಲ್ಲಿದ್ದು, ಅಸಲು ಭರಣ ಮಾಡುವುದೇ ಕಷ್ಟವಿದೆ. ಇದೀಗ ಬಡ್ಡಿ ರಿಯಾಯಿತಿಗೂ ಕೊಕ್ಕೆ ಹಾಕಿದ್ದು ಎಷ್ಟು ಸರಿ
ಎಂಬ ಪ್ರಶ್ನೆ ಮೂಡಿಬಂದಿದೆ. ಸಾಲ ಪಡೆದ ರೈತ ಮಾಸಿಕ 20 ಸಾವಿರ. ರೂ ಪಿಂಚಣಿ ಅಥವಾ ವೇತನ ಪಡೆಯುತ್ತಿದ್ದರೆ, ಮೂರು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ್ದರೂ ಬಡ್ಡಿ ಮನ್ನಾ ಸೌಲಭ್ಯದಿಂದ ಹೊರಕ್ಕೆ ಉಳಿಯಲಿದ್ದಾನೆ.

ಕೇಂದ್ರ ಸರಕಾರದ ಬಡ್ಡಿ ರಿಯಾಯಿತಿ ಸೌಲಭ್ಯ ಸಿಕ್ಕರೂ ರಾಜ್ಯ ಸರಕಾರದ ಶೆ.6.4ರ ಬಡ್ಡಿ ಸಹಾಯಧನದ ನೆರವು ಲಭ್ಯವಾಗುವುದಿಲ್ಲ. ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ನೇತೃತ್ವದಲ್ಲಿ ಈಗಾಗಲೇ ಸ್ಪೀಕರ್‌  ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮೂಲಕ ಹಿಂದಿನ ಆದೇಶವನ್ನೇ ಮುಂದುವರಿಸಬೇಕು ಎಂದು ಸರಕಾರಕ್ಕೆ ಮಾಡಲಾಗಿದೆ.

ಕಷ್ಟದಲ್ಲಿರುವ ಕೃಷಿಕನಿಗೆ ಗಾಯದ ಮೇಲಿನ ಬರೆ ಎಳೆದಂತಾಗಿದೆ. ಸರಕಾರ ಈ ಆದೇಶ ವಾಪಸ್‌ ಪಡೆಯಬೇಕು. ರೈತರಿಗೆ ಇನ್ನೂ ಹೆಚ್ಚಿನ ಬಡ್ಡಿ ರಿಯಾಯತಿ ಸಾಲ ಮನ್ನಾ ಒದಗಿಸಬೇಕು.
ಗಣಪತಿ ವೆಂ. ಹೆಗಡೆ, ಸಾಲೇಕೊಪ್ಪ ರೈತ

Advertisement

ಈ ಷರತ್ತಿನಿಂದ ಕಳೆದ ವರ್ಷದ ಬೆಳೆ ಸಾಲಕ್ಕೆ ಹಲವರು ಬಡ್ಡಿ ಕಟ್ಟಬೇಕಾಗುತ್ತದೆ ಹಾಗೂ ಹೊಸ ಸಾಲಕ್ಕೆ ರೇಷನ್‌ ಕಾರ್ಡ್‌ ಕಡ್ಡಾಯವಾಗಲಿದೆ. ಹಳೆ ಆದೇಶವನ್ನೇ ಜಾರಿಗೊಳಿಸಿದರೆ ಮಾತ್ರ ರೈತರಿಗೆ ಅನುಕೂಲ. 
ಜಿ.ಆರ್‌. ಹೆಗಡೆ ಬೆಳ್ಳೇಕೇರಿ, ಅಧ್ಯಕ್ಷ ಯಡಹಳ್ಳಿ ಸೊಸೈಟಿ

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next