ಕೋಲ್ಕತಾ: ವಿಕೆಟ್‌ಕೀಪರ್ ತಥಾ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಾಹಾ ದೇಶೀಯ ಕ್ರಿಕೆಟ್ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆಯ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಜೆಸಿ ಮುಖರ್ಜಿ ಟ್ರೋಫಿ ಕ್ರಿಕೆಟ್ ಕೂಟದಲ್ಲಿ ಮೋಹನ್ ಬಗಾನ್ ತಂಡದ ಪರ ಆಡಿದ ಸಾಹಾ ಸಿಕ್ಸರ್‌ಗಳ ಸುರಿಮಳೆಗೈದು ಈ ಸಾಧನೆ ದಾಖಲಿಸಿದರು. ಸ್ಫೋಟಕ ಇನ್ನಿಂಗ್ಸ್ ವೇಳೆ ಅವರು 4 ಬೌಂಡರಿ ಮತ್ತು 14 ಸಿಕ್ಸರ್ ಬಾರಿಸಿದ್ದಾರೆ.
ಕಾಳಿಘಾಟ್‌ನಲ್ಲಿ ಬಿಎನ್‌ಆರ್ ರಿಕ್ರಿಯೇಶನ್ ಕ್ಲಬ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಗೆಲ್ಲಲು 151 ರನ್ ಗಳಿಸುವ ಸವಾಲು ಪಡೆದ ಮೋಹನ್ ಬಗಾನ್ ತಂಡವು ಕೇವಲ 7 ಓವರ್‌ಗಳಲ್ಲಿ ಗುರಿ ತಲುಪಿತು. ನಾಯಕ ಸುಭೋಮೊಯ್ ದಾಸ್ (22 ಎಸೆತಗಳಲ್ಲಿ 43) ಅವರ ಜತೆ ಇನ್ನಿಂಗ್ಸ್ ಆರಂಭಿಸಿದ ಸಾಹಾ ಸ್ಫೋಟಕ ಆಟವಾಡಿ ನೆರೆದ ಪ್ರೇಕ್ಷಕರನ್ನು ರಂಜಿಸಿದರು.
ನಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಭರ್ಜರಿ ಬ್ಯಾಟಿಂಗ್ ನಡೆಸುವ ಅನುಭವ ಪಡೆದೆ. ಅದಕ್ಕಾಗಿ ನ್ಪೋಟಕ ಆಟಕ್ಕೆ ಇಳಿದೆ ಎಂದ ಅವರು ಇದೊಂದು ದಾಖಲೆ ಎಂಬುದು ನನಗೆ ತಿಳಿದಿಲ್ಲ. ಆದರೆ ಮುಂಬರುವ ಐಪಿಎಲ್ ಕೂಟವನ್ನು ಎದುರು ನೋಡುತ್ತಿದ್ದೇನೆ ಎಂದರು. ಬೇರೆ ರೀತಿಯ ಹೊಡೆತಗಳಿಗೆ ಪ್ರಯತ್ನಿಸಿದೆ ಮತ್ತು ಇದರಲ್ಲಿ ಯಶಸ್ವಿಯಾದೆ ಎಂದವರು ತಿಳಿಸಿದರು. ನಿರ್ದಿಷ್ಟ ಓವರ್‌ಗಳ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್ ಆರಂಭಿಸುವುದೆಂದರೆ ಸಾಹಾ ಅವರಿಗೆ ಇಷ್ಟ.
ನುರಿತ ಟೆಸ್ಟ್ ಆಟಗಾರರಾಗಿರುವ ಸಾಹಾ ಈ ಪಂದ್ಯದಲ್ಲಿ 510 ಸ್ಟ್ರೈಕ್‌ರೇಟ್‌ನಂತೆ ಆಡಿದ್ದರು. ಭಾರತ ಪರ ಟೆಸ್ಟ್‌ನಲ್ಲಿ ಮಾತ್ರ ಆಡಿದ್ದರೂ ದೇಶೀಯ ಮಟ್ಟದಲ್ಲಿ ಸಾಹಾ 164 ಟಿ20 ಪಂದ್ಯವನ್ನಾಡಿದ್ದಾರೆ. ಒಂದು ಶತಕ ಮತ್ತು 14 ಅರ್ಧಶತಕ ಸಹಿತ 2718 ರನ್ ಗಳಿಸಿದ್ದಾರೆ.
2018ರ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ ಹೈದರಾಬಾದ್ ತಂಡವು 5 ಕೋಟಿ ರೂ.ಗಳಿಗೆ ಸಾಹಾ ಅವರನ್ನು ಖರೀದಿಸಿದೆ. ಇನ್ನೆರಡು ವಾರಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಸಾಹಾ ಈ ಹಿಂದೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್‌ರೈಡರ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. 104 ಪಂದ್ಯವನ್ನಾಡಿದ್ದು 1557 ರನ್ ಗಳಿಸಿದ್ದಾರೆ. ಐಪಿಎಲ್ ಫೈನಲ್‌ನಲ್ಲಿ ಶತಕ ಸಿಡಿಸಿದ ಮೊದಲ ಮತ್ತು ಏಕೈಕ ಆಟಗಾರರಾಗಿದ್ದಾರೆ. ಶತಕ ಗಳಿಸಿದ್ದರೂ ಅವರು ಪ್ರತಿನಿಧಿಸಿದ್ದ ಪಂಜಾಬ್ ತಂಡ 2014ರ ಐಪಿಎಲ್ ಫೈನಲ್‌ನಲ್ಲಿ ಕೋಲ್ಕತಾಕ್ಕೆ ಶರಣಾಗಿತ್ತು.