ಪಟಿಯಾಲ: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗಾಗಿ ಆ. 25 ಮತ್ತು 26ರಂದು ಆಯ್ಕೆ ಟ್ರಯಲ್ಸ್ ನಡೆಯಲಿದೆ ಎಂದು ತಾತ್ಕಾಲಿಕ ಸಮಿತಿ ಸೋಮವಾರ ಪ್ರಕಟಿಸಿದೆ. ಈ ಮೂಲಕ ಆಯ್ಕೆ ಟ್ರಯಲ್ಸ್ ಬಗೆಗಿನ ಅನಿಶ್ಚಿತತೆ ದೂರವಾಗಿದೆ. ಆದರೆ ಬಜರಂಗ್ ಪೂನಿಯ ಮತ್ತು ವಿನೇಶ್ ಪೊಗಟ್ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಬಗ್ಗೆ ದೃಢಪಡಿಸಿಲ್ಲ.
ಏಷ್ಯನ್ ಗೇಮ್ಸ್ ಟ್ರಯಲ್ಸ್‌ಗೆ ಪೂನಿಯ ಮತ್ತು ಪೊಗಟ್ ಅವರಿಗೆ ವಿನಾಯಿತಿ ನೀಡಿದ ತಾತ್ಕಾಲಿಕ ಸಮಿತಿಯ ನಿರ್ಧಾರವನ್ನು ಕುಸ್ತಿ ಸಮುದಾಯದ ಬಹುತೇಕ ಮಂದಿ ತೀವ್ರವಾಗಿ ಟೀಕಿಸಿದ್ದರಿಂದ ಕೋಲಾಹಲ ಸೃಷ್ಟಿಯಾಗಿತ್ತು.
ಐಒಎ ನೇಮಕ ಮಾಡಿದ ತಾತ್ಕಾಲಿಕ ಸಮಿತಿಯು ಮುಂಬರುವ ವಿಶ್ವ ಟ್ರಯಲ್ಸ್‌ಗೆ ಯಾವುದೇ ಕುಸ್ತಿಪಟುವಿಗೆ ವಿನಾಯಿತಿ ನೀಡದಿರಲು ನಿರ್ಧರಿಸಿದೆ.
ಆದರೆ ಇದೀಗ ಬಜರಂಗ್ ಅಥವಾ ವಿನೇಶ್ ಪಾಲ್ಗೊಳ್ಳುವ ಬಗ್ಗೆ ದೃಢಪಡಿಸದಿರುವುದು ಕಿರಿಕಿರಿಯಾಗಿದೆ.
ಒಂದು ವೇಳೆ ಇವರಿಬ್ಬರು ಟ್ರಯಲ್ಸ್‌ನಲ್ಲಿ ಸ್ಪರ್ಧಿಸದಿದ್ದರೆ ಉಳಿದ ಕುಸ್ತಿಪಟುಗಳಿಗೆ ಇನ್ನುಳಿದ ಆರು ಒಲಿಂಪಿಕ್ ಕೆ.ಜಿ. ತೂಕ ವಿಭಾಗಗಳಲ್ಲಿ ಟ್ರಯಲ್ಸ್ ನಡೆಸುವ ಅಗತ್ಯವಿಲ್ಲ. ಯಾಕೆಂದರೆ ಈ ಕುಸ್ತಿಪಟುಗಳು ಈಗಾಗಲೇ ಏಷ್ಯನ್ ಗೇಮ್ಸ್‌ಗಾಗಿ ನಡೆದ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ತಾತ್ಕಾಲಿಕ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಸೆ. 16ರಿಂದ ಆರಂಭವಾಗಲಿದೆ. ಇದು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಮೊದಲ ಅರ್ಹತಾ ಕೂಟವೂ ಆಗಿರಲಿದೆ.