ಹೊಸದಿಲ್ಲಿ : ಹದಿನಾರರ ಹರೆಯದ ಕಬಡ್ಡಿ ಆಟಗಾತಿಯನ್ನು ರೇಪ್ ಮಾಡಿದ ಆರೋಪದ ಮೇಲೆ ಕುಸ್ತಿ ಪಟುವನ್ನು ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಬಂಧಿಸಿದ್ದಾರೆ.
ಉತ್ತರ ದಿಲ್ಲಿಯ ಮಾಡೆಲ್ ಟೌನ್‌ನಲ್ಲಿ ಪೊಲೀಸರು ಬಂಧಿಸಿರುವ ರೇಪ್ ಆರೋಪಿ ಕುಸ್ತಿಪಟು ನರೇಶ್ ದಹಿಯಾ ಎಂಬಾತನು ಪಶ್ಚಿಮ ದಿಲ್ಲಿಯ ಜೈನ್ ನಗರ ಬಡಾವಣೆಯಲ್ಲಿ ಕುಸ್ತಿ ತರಬೇತಿ ಕೇಂದ್ರವೊಂದನ್ನು ನಡೆಸುತ್ತಿದ್ದಾನೆ ಎಂದು ತಿಳಿದು ಬಂದಿದೆ.
ತನ್ನ ಮೇಲೆ ದಹಿಯಾ ರೇಪ್ ಎಸಗಿದ ಒಂದು ವಾರದ ಬಳಿಕ ಸಂತ್ರಸ್ತ ಬಾಲಕಿಯು ಪೊಲೀಸರಿಗೆ ದೂರು ನೀಡಿದ್ದು ಅವರು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಹುಡುಗಿಯು ತನ್ನ ದೂರಿನಲ್ಲಿ “ಆರೋಪಿ ದಹಿಯಾ ತಾನು ಸ್ಟೇಡಿಯಂ ಅಧಿಕಾರಿ ಎಂದು ನನ್ನಲ್ಲಿ ಪರಿಚಯಿಸಿಕೊಂಡಿದ್ದಾನೆ. ಜು.9ರಂದು ಆತ ನನ್ನ ಮೇಲೆ ರೇಪ್ ಎಸಗಿದ್ದಾನೆ. ಆ ಬಳಿಕ ಆತ ನನ್ನನ್ನು ಸ್ಟೇಡಿಯಂ ಹೊರಗಿನ ರಸ್ತೆಯಲ್ಲಿ ಡ್ರಾಪ್ ಮಾಡಿ “ರೇಪ್ ಬಗ್ಗೆ ಯಾರಿಗಾದರೂ ಹೇಳಿದರೆ ಕೊಂದೇ ಬಿಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ’ ಎಂದು ಹೇಳಿದ್ದಾಳೆ.
ಮೊನ್ನೆ ಸೋಮವಾರ ರೇಪ್ ಸಂತ್ರಸ್ತ ಬಾಲಕಿಯು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ. ಒಂದು ವಾರ ಕಾಲ ಆಕೆ ತನ್ನ ಮೇಲಿನ ಅತ್ಯಾಚಾರದಿಂದ ತೀವ್ರವಾದ ಮಾನಸಿಕ ಆಘಾತಕ್ಕೆ ಗುರಿಯಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ರೇಪ್ ಸಂತ್ರಸ್ತ ಬಾಲಕಿಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಲೋಕ ನಾಯಕ ಆಸ್ಪತ್ರೆಗೆ ಒಯ್ದಿದ್ದಾರೆ. ಆದರೆ ಅಲ್ಲಿನ ವೈದ್ಯರು ಈ ಪ್ರಕರಣವನ್ನು ಅನಂತರ ಬಾಬು ಜಗಜೀವನ್ ರಾಮ್ ಮೆಮೋರಿಯಲ್ ಆಸ್ಪತ್ರೆಗೆ ಉಲ್ಲೇಖೀಸಿದ್ದಾರೆ.