ಬೆಂಗಳೂರು: ರಿಚಾ ಘೋಷ್ ಮತ್ತು ಸಬ್ಬಿನೆನಿ ಮೇಘನಾ ಅವರ ಸಕಾಲಿಕ ಅರ್ಧಶತಕದಿಂದಾಗಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವು ವನಿತಾ ಪ್ರೀಮಿಯರ್ ಲೀಗ್‌ನ ಶನಿವಾರದ ಪಂದ್ಯದಲ್ಲಿ ಯುಪಿ ವಾರಿಯರ್ ತಂಡವನ್ನು ಎರಡು ರನ್ನಿನಿಂದ ರೋಚಕವಾಗಿ ಸೋಲಿಸಿದೆ.
ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್‌ಸಿಬಿ ತಂಡವು ರಿಚಾ ಮತ್ತು ಮೇಘನಾ ಅವರ ಅರ್ಧಶತಕದಿಂದಾಗಿ ಆರು ವಿಕೆಟಿಗೆ 157 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು. ಇದಕ್ಕುತ್ತರವಾಗಿ ಯುಪಿ ವಾರಿಯರ್ ತಂಡವು ಗೆಲುವಿನ ಸನಿಹಕ್ಕೆ ಬಂದರೂ ಅಂತಿಮವಾಗಿ 7 ವಿಕೆಟಿಗೆ 155 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಈ ಮೊದಲು ಬೆಂಗಳೂರು ತಂಡವು 7.5 ಓವರ್‌ಗಳಲ್ಲಿ ಮೂರು ವಿಕೆಟಿಗೆ 54 ರನ್ ಗಳಿಸಿ ಒದ್ದಾಡುತ್ತಿತ್ತು. ಈ ಹಂತದಲ್ಲಿ ಮೇಘನಾ ಅವರನ್ನು ಸೇರಿಕೊಂಡ ರಿಚಾ ಘೋಷ್ ನಾಲ್ಕನೇ ವಿಕೆಟಿಗೆ 71 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು. ಮೇಘನಾ 44 ಎಸೆತಗಳಿಂದ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದ್ದರೆ ರಿಚಾ ಕೇವಲ 37 ಎಸೆತಗಳಿಂದ 62 ರ ನ್ ಹೊಡೆದರು. 12 ಬೌಂಡರಿ ಬಾರಿಸಿದ್ದರು. ಎರಡು ಬಾರಿ ಜೀವದಾನ ಪಡೆದ ಮೇಘನಾ ಕೆಲವೊಂದು ಆಕರ್ಷಕ ಹೊಡೆತಗಳಿಂದ ನೆರೆದ ಪ್ರೇಕ್ಷರನ್ನು ರಂಜಿಸಿದ್ದರು.
ಮುಂಬೈಗೆ ಗುಜರಾತ್ ಎದುರಾಳಿ
ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿರುವ ಮುಂಬೈ ಇಂಡಿಯನ್ಸ್ ರವಿವಾರ ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಸವಾಲು ಸ್ವೀಕರಿಸಲಿದೆ.
ಕಳೆದ ಋತುವಿನಲ್ಲಿ ಮುಂಬೈ ಮತ್ತು ಗುಜರಾತ್ ಎರಡು ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಎರಡೂ ಪಂದ್ಯಗಳಲ್ಲೂ ಕೌರ್ ಪಡೆ ಗೆಲುವು ದಾಖಲಿಸಿತ್ತು. ಮೊದಲನೇ ಪಂದ್ಯವನ್ನು ಭರ್ಜರಿ 143 ರನ್‌ಗಳಿಂದ ಜಯಿಸಿದ್ದ ಮುಂಬೈ, ಎರಡನೇ ಪಂದ್ಯದಲ್ಲಿ 55 ರನ್‌ಗಳಿಂದ ಗೆಲುವಿನ ನಗು ಬೀರಿತ್ತು.