Advertisement
ಹೌದು, ಆರ್‌ಸಿಬಿ ಪುರುಷರ ತಂಡ ಕಳೆದ 16 ವರ್ಷಗಳಿಂದ ಸಾಧಿಸದೇ ಇದ್ದುದನ್ನು ವನಿತಾ ತಂಡ ಎರಡೇ ವರ್ಷದಲ್ಲಿ ಸಾಧಿಸಿ ತೋರಿಸಿದ್ದು ಹೆಮ್ಮೆಯ ಸಂಗತಿ. ಲೀಗ್ ಚರಿತ್ರೆಯಲ್ಲೇ ಅತ್ಯಧಿಕ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿಯ ಸಂತಸಕ್ಕೆ ಮೇರೆ ಇಲ್ಲ.
“ನಾನಿಲ್ಲಿ ಕಲಿತ ಮುಖ್ಯ ಸಂಗತಿಯೆಂದರೆ ಸ್ವಯಂ ನಂಬಿಕೆ. ಎಷ್ಟೇ ಒತ್ತಡ ಸನ್ನಿವೇಶದಲ್ಲೂ ಈ ಸ್ವಯಂ ನಂಬಿಕೆ ಹಾಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂಬ ಪಾಠ ಕಲಿತಿದ್ದೇನೆ. ಕಳೆದ ಸೀಸನ್‌ನಲ್ಲಿ ನನಗೆ ಇದರ ಅರಿವಿನ, ಸ್ಪಷ್ಟತೆಯ ಕೊರತೆ ಕಾಡಿತ್ತು. ಕೆಲವು ಅನುಮಾನಗಳು ಕಾಡತೊಡಗಿದಾಗ ನಾನದನ್ನು ನನ್ನಲ್ಲೇ ಪ್ರಶ್ನಿಸಿಕೊಂಡು ಪರಿಹಾರ ಕಂಡಿದ್ದೇನೆ. ಇದು ನನ್ನ ಪಾಲಿನ ಬಹು ದೊಡ್ಡ ಕಲಿಕೆ’ ಎಂಬುದಾಗಿ ಮಂಧನಾ ಹೇಳಿದರು. “ಕಳೆದ ವರ್ಷ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಕಪ್ ಎತ್ತಿತು. ಭಾರತ ತಂಡದ ನಾಯಕಿಯೂ ಆಗಿದ್ದ ಕಾರಣ ಮೊದಲ ಕಪ್ ಅವರೇ ಗೆದ್ದರೆ ಒಳ್ಳೆಯದು ಎಂದು ಹಾರೈಸಿದ್ದೆ. ಈ ಬಾರಿ ಭಾರತ ತಂಡದ ದ್ವಿತೀಯ ನಾಯಕಿಯಾದ ನನಗೆ ಕಪ್ ಒಲಿಯಿತು. ಒಟ್ಟಾರೆಯಾಗಿ ಇದು ಭಾರತ ತಂಡದ ಸಾಮರ್ಥ್ಯ ಹಾಗೂ ಆಳವನ್ನು ಸೂಚಿಸುತ್ತದೆ. ಇದು ಕೇವಲ ಆರಂಭ ಮಾತ್ರ, ನಾವು ಸಾಗಬೇಕಾದ ಹಾದಿ ಬಹಳ ದೂರವಿದೆ…’ ಎಂದು ಮಂಧನಾ ಹೇಳಿದರು.
Related Articles
ಆರಂಭದಲ್ಲಿ ಡೆಲ್ಲಿ ಮುನ್ನುಗ್ಗುತ್ತಿದ್ದ ರೀತಿಯಿಂದ ಒಂದಿಷ್ಟು ಆತಂಕ ಕಾಡಿದ್ದು ನಿಜ ಎಂದು ಫೈನಲ್ ಪಂದ್ಯದ ಕುರಿತು ಸ್ಮತಿ ಮಂಧನಾ ಹೇಳಿದರು.
Advertisement
“6 ಓವರ್‌ಗಳಲ್ಲಿ 60 ರನ್ ಆದಾಗ ನಮ್ಮ ಯೋಜನೆಯಂತೆ ಇದು ಸಾಗುತ್ತಿಲ್ಲ ಎಂಬುದರ ಅರಿವಾಗತೊಡಗಿತು. ಮುಖ್ಯವಾಗಿ ಫೀಲ್ಡ್ ಸೆಟ್ಟಿಂಗ್ ನಮ್ಮೆಣಿಕೆಯಂತೆ ಇರಲಿಲ್ಲ. ಆಗಲೂ ನಾನು ಆತ್ಮವಿಶ್ವಾಸವನ್ನೇ ನಂಬಿಕೊಂಡೆ. ತುಂಬಾ ಶಾಂತಚಿತ್ತದಿಂದಿದ್ದೆ. ಬೌಲರ್‌ಗಳೊಂದಿಗೆ ಚರ್ಚಿಸಿ ಇದನ್ನು ಪರಿಹರಿಸಿಕೊಂಡೆ’ ಎಂದರು.“ಚೇಸಿಂಗ್ ವೇಳೆಯೂ ಅಷ್ಟೇ… ಸವಾಲು ಸಣ್ಣದಿದೆ, ನಮ್ಮ ಯೋಜನೆಯಂತೆ ಸಾಗೋಣ, ಯಾವ ಕಾರಣಕ್ಕೂ 20 ರನ್ನಿಗೆ 3 ವಿಕೆಟ್ ಅಥವಾ 4 ವಿಕೆಟ್ ಎನ್ನುವ ಸ್ಥಿತಿ ಎದುರಾಗಬಾರದು ಎಂದು ನಿರ್ಧರಿಸಿದ್ದೆವು’ ಎಂದರು. ಶ್ರೇಯಾಂಕಾ ಪರಿಪೂರ್ಣ ಕ್ರಿಕೆಟರ್
ಇದೇ ವೇಳೆ ಕರ್ನಾಟಕದ ಪ್ರತಿಭಾನ್ವಿತ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರನ್ನು ಪ್ರಶಂಸಿಸಲು ಮಂಧನಾ ಮರೆಯಲಿಲ್ಲ.”ಶ್ರೇಯಾಂಕಾ ಓರ್ವ ಪರಿಪೂರ್ಣ ಕ್ರಿಕೆಟರ್. ಆರಂಭದ ಕೆಲವು ಪಂದ್ಯಗಳಲ್ಲಿ ಅವರ ಎಣಿಕೆಯಂತೆ ಬೌಲಿಂಗ್ ನಡೆಯಲಿಲ್ಲ. ಆಗ ನಾನು, ಚಿಂತಿಸುವುದು ಬೇಡ… ಮಾರ್ಚ್ 17ರಂದು ನಿಮ್ಮಿಂದ ವಿಶೇಷ ಸಾಧನೆ ಮೂಡಿಬರಲಿದೆ ಎಂದಿದ್ದೆ. ಇದು ನಿಜವಾಗಿದೆ. ಶ್ರೇಯಾಂಕಾ ಪರ್ಪಲ್ ಕ್ಯಾಪ್ ಪಡೆಯುವ ಬಗ್ಗೆ ನನಗೆ ನಂಬಿಕೆ ಇತ್ತು’ ಎಂದರು. ಕೊಹ್ಲಿ ಅಭಿನಂದನೆ
ರವಿವಾರವಷ್ಟೇ ಲಂಡನ್‌ನಿಂದ ಭಾರತಕ್ಕೆ ಆಗಮಿಸಿದ ಆರ್‌ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಆರ್‌ಸಿಬಿ ವನಿತೆಯರಿಂದ ಗೆಲುವಿನ ಸ್ವಾಗತ ಕಾದಿತ್ತು. ಕೂಡಲೇ ಅವರು ವೀಡಿಯೋ ಕಾಲ್ ಮೂಲಕ ಆರ್‌ಸಿಬಿ ಆಟಗಾರ್ತಿಯರನ್ನು ಅಭಿನಂದಿಸಿದರು. “ವಿರಾಟ್ ಕೊಹ್ಲಿ ನಮ್ಮ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು ಬಹಳ ಖುಷಿ ಕೊಟ್ಟಿತು. ಅವರೇನು ಹೇಳಿದರೆಂದು ಸರಿಯಾಗಿ ಕೇಳಲಿಲ್ಲ. ಇಲ್ಲಿ ಅಷ್ಟೊಂದು ಗದ್ದಲವಿತ್ತು. ಅವರು ಥಂಬ್ಸ್ ಅಪ್ ಮಾಡುತ್ತಿದ್ದರು. ನಾನೂ ಅದೇ ರೀತಿ ಪ್ರತಿಕ್ರಿಯಿಸಿದೆ. ಅವರು ಭಾರೀ ಸಂಭ್ರಮದಲ್ಲಿದ್ದರು. ಅವರ ನಗೆಯಲ್ಲೇ ಇದು ತಿಳಿಯುತ್ತಿತ್ತು’ ಎಂದು ಮಂಧನಾ ಹೇಳಿದರು. “ವಿರಾಟ್ ಕೊಹ್ಲಿ ಕಳೆದ ವರ್ಷ ತಂಡದೊಂದಿಗೆ ಬೆರೆತು ಸಲಹೆಗಳನ್ನು ನೀಡಿದ್ದರು. ವೈಯಕ್ತಿಕವಾಗಿ ನನಗೆ ಹಾಗೂ ತಂಡಕ್ಕೆ ಇದು ಬಹಳ ನೆರವಿಗೆ ಬಂತು. ಕೊಹ್ಲಿ ಕಳೆದ 16 ವರ್ಷಗಳಿಂದಲೂ ಆರ್‌ಸಿಬಿ ಫ್ರಾಂಚೈಸಿಯೊಂದಿಗಿದ್ದವರು. ಹೀಗಾಗಿ ಅವರ ಮುಖದಲ್ಲಿನ ಸಂತಸವನ್ನು ಗುರುತಿಸಲು ನನಗೆ ಸಾಧ್ಯವಾಯಿತು’ ಎಂದರು. WPL: ಬಹುಮಾನಿತರ ಯಾದಿ
·ಚಾಂಪಿಯನ್: ಆರ್‌ಸಿಬಿ-
6 ಕೋಟಿ ರೂ.
·ರನ್ನರ್ ಅಪ್: ಡೆಲ್ಲಿ-
3 ಕೋಟಿ ರೂ.
·ಆರೇಂಜ್ ಕ್ಯಾಪ್: ಎಲ್ಲಿಸ್ ಪೆರ್ರಿ (ಆರ್‌ಸಿಬಿ)-5 ಲಕ್ಷ ರೂ.
·ಪರ್ಪಲ್ ಕ್ಯಾಪ್: ಶ್ರೇಯಾಂಕಾ ಪಾಟೀಲ್ (ಆರ್‌ಸಿಬಿ)-
5 ಲಕ್ಷ ರೂ.
·ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್: ದೀಪ್ತಿ ಶರ್ಮ (ಯುಪಿ)-5 ಲಕ್ಷ ರೂ.
·ಎಮರ್ಜಿಂಗ್ ಪ್ಲೇಯರ್: ಶ್ರೇಯಾಂಕಾ ಪಾಟೀಲ್ (ಆರ್‌ಸಿಬಿ)-5 ಲಕ್ಷ ರೂ.
·ಪವರ್‌ಫುಲ್ ಸ್ಟ್ರೈಕರ್: ಜಾರ್ಜಿಯಾ ವೇರ್‌ಹ್ಯಾಮ್ (ಆರ್‌ಸಿಬಿ)-5 ಲಕ್ಷ ರೂ. ಹಾಗೂ ಟಾಟಾ
ಪಂಚ್ ಇ.ವಿ.
·ಅತ್ಯಧಿಕ ಸಿಕ್ಸರ್: ಶಫಾಲಿ ವರ್ಮ (ಡೆಲ್ಲಿ)-5 ಲಕ್ಷ ರೂ.
·ಅತ್ಯುತ್ತಮ ಕ್ಯಾಚ್: ಎಸ್. ಸಜನಾ (ಮುಂಬೈ)-
5 ಲಕ್ಷ ರೂ.
·ಪ್ಲೇಯರ್ ಆಫ್ ದ ಫೈನಲ್: ಸೋಫಿ ಮೊಲಿನಾಕ್ಸ್ (ಆರ್‌ಸಿಬಿ)-2.5 ಲಕ್ಷ ರೂ.
·ಫೈನಲ್‌ನ ಪವರ್‌ಫುಲ್ ಸ್ಟ್ರೈಕರ್: ಶಫಾಲಿ ವರ್ಮ (ಡೆಲ್ಲಿ)-1 ಲಕ್ಷ ರೂ.
·ಫೇರ್ ಪ್ಲೇ ಅವಾರ್ಡ್: ರಾಯಲ್ ಚಾಲೆಂಜರ್ ಬೆಂಗಳೂರು ತಂಡ. ವಿಜಯ್ ಮಲ್ಯ ಅಭಿನಂದನೆ
ವನಿತಾ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿ ಮೂಡಿಬಂದ ಆರ್‌ಸಿಬಿ ತಂಡಕ್ಕೆ ವಿಜಯ್ ಮಲ್ಯ ಅಭಿನಂದಿಸಿದ್ದಾರೆ. ಅವರು ಆರ್‌ಸಿಬಿ ಪುರುಷರ ತಂಡದ ಮಾಜಿ ಮಾಲಕರಾಗಿದ್ದು, ಸದ್ಯ ಲಂಡನ್‌ನಲ್ಲಿದ್ದಾರೆ.
“ವನಿತಾ ಪ್ರೀಮಿಯರ್ ಲೀಗ್ ಗೆದ್ದ ಆರ್‌ಸಿಬಿ ತಂಡಕ್ಕೆ ಹೃತೂ³ರ್ವಕ ಅಭಿನಂದನೆಗಳು. ಆರ್‌ಸಿಬಿ ಪುರುಷರ ತಂಡವೂ ಐಪಿಎಲ್ ಗೆದ್ದರೆ ಈ ಖುಷಿ ದ್ವಿಗುಣಗೊಳ್ಳಲಿದೆ. ಗುಡ್ ಲಕ್’ ಎಂದು ವಿಜಯ್ ಮಲ್ಯ “ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಕ್ಸ್ ಟ್ರಾ ಇನ್ನಿಂಗ್ಸ್
ಡೆಲ್ಲಿ ವಿರುದ್ಧ ಆಡಿದ 5 ಪಂದ್ಯಗಳಲ್ಲಿ ಆರ್‌ಸಿಬಿ ಮೊದಲ ಜಯ ಸಾಧಿಸಿತು. ಹಿಂದಿನ ನಾಲ್ಕರಲ್ಲೂ ಸೋಲನುಭವಿಸಿತ್ತು. ಈ ಗೆಲುವು ಫೈನಲ್‌ನಲ್ಲೇ ಒಲಿದದ್ದು ವಿಶೇಷ. ಫೈನಲ್‌ನಲ್ಲಿ ಆರ್‌ಸಿಬಿ ಸ್ಪಿನ್ನರ್ 9 ವಿಕೆಟ್ ಉರುಳಿಸಿದರು. ಇದು ಡಬ್ಲ್ಯುಪಿಎಲ್ ಪಂದ್ಯವೊಂದರಲ್ಲಿ ತಂಡವೊಂದರ ಸ್ಪಿನ್ ಬೌಲರ್‌ಗಳ ಅತ್ಯುತ್ತಮ ಸಾಧನೆ. ಕಳೆದ ವರ್ಷ ಆರ್‌ಸಿಬಿ ವಿರುದ್ಧ ಯುಪಿ ವಾರಿಯರ್ ಸ್ಪಿನ್ನರ್ 8 ವಿಕೆಟ್ ಉರುಳಿಸಿದ ದಾಖಲೆ ಪತನಗೊಂಡಿತು. ಶ್ರೇಯಾಂಕಾ ಪಾಟೀಲ್ ಕೂಟವೊಂದರ 2 ಪಂದ್ಯಗಳಲ್ಲಿ 4 ವಿಕೆಟ್ ಹಾರಿಸಿದ ಮೊದಲ ಬೌಲರ್ ಎನಿಸಿದರು. ಈ ಎರಡೂ ಸಾಧನೆಗಳು ಡೆಲ್ಲಿ ವಿರುದ್ಧವೇ ದಾಖಲಾದದ್ದು ವಿಶೇಷ. ಕಳೆದ ರವಿವಾರ 26ಕ್ಕೆ 4 ವಿಕೆಟ್ ಉರುಳಿಸಿದ್ದರು. ಈ ಬಾರಿ 12ಕ್ಕೆ 4 ವಿಕೆಟ್ ಕೆಡವಿದರು. ಎಲ್ಲಿಸ್ ಪೆರ್ರಿ ಕೊನೆಯ 3 ಪಂದ್ಯಗಳಲ್ಲಿ 112.80ರ ಸ್ಟ್ರೈಕ್‌ರೇಟ್‌ನಲ್ಲಿ 141 ರನ್ ಬಾರಿಸಿದರು. ಒಮ್ಮೆ ಮಾತ್ರ ಔಟ್ ಆಗಿದ್ದರು. ಈ ಅವಧಿಯಲ್ಲಿ 8.28ರ ಸರಾಸರಿಯಲ್ಲಿ 7 ವಿಕೆಟ್ ಕೆಡವಿದ್ದರು. ಪಂದ್ಯವೊಂದರಲ್ಲಿ 6 ವಿಕೆಟ್ ಉರುಳಿಸಿದ ಮೊದಲ ಬೌಲರ್ ಎಂಬ ಹಿರಿಮೆಗೂ ಪಾತ್ರರಾದರು. ಎಲ್ಲಿಸ್ ಪೆರ್ರಿ ಈ ಸೀಸನ್‌ನಲ್ಲಿ ಸರ್ವಾಧಿಕ 347 ರನ್ ಪೇರಿಸಿದರು. ಇದೊಂದು ದಾಖಲೆ. ಕಳೆದ ವರ್ಷ ಮೆಗ್ ಲ್ಯಾನಿಂಗ್ 345 ರನ್ ಬಾರಿಸಿದ ದಾಖಲೆ ಪತನಗೊಂಡಿತು. ಹೊಸದಿಲ್ಲಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಆರ್‌ಸಿಬಿ ಸ್ಪಿನ್ನರ್ 24 ವಿಕೆಟ್ ಉರುಳಿಸಿದರು. ಬೆಂಗಳೂರಿನಲ್ಲಿ ಆರ್‌ಸಿಬಿ ಸ್ಪಿನ್ನರ್‌ಗಳ ಸಾಧನೆ 20 ವಿಕೆಟ್.