ಅಹಮದಾಬಾದ್: ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ನಲ್ಲಿ ಗುಂಪು ಹಂತದಲ್ಲಿಯೇ ಹೊರಬಿದ್ದ ಭಾರತ ವನಿತಾ ತಂಡವು ಇದೀಗ ಏಕದಿನ ಸರಣಿ ಆಡುತ್ತಿದೆ. ಟಿ20 ವಿಶ್ವಕಪ್ ಚಾಂಪಿಯನ್ ನ್ಯೂಜಿಲ್ಯಾಂಡ್ ವಿರುದ್ದದ ಏಕದಿನ ಸರಣಿ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಿದೆ.
ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ((Harmanpreet Kaur) ಗೆ ವಿಶ್ರಾಂತಿ ನೀಡಲು ಭಾರತೀಯ ಮಹಿಳಾ ತಂಡದ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ. ಕೌರ್ ಅನುಪಸ್ಥಿತಿಯಲ್ಲಿ ಸ್ಮೃತಿ ಮಂಧಾನ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇತ್ತೀಚೆಗೆ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ತಂಡವು ನಾಕೌಟ್ ಹಂತವನ್ನು ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಹರ್ಮನ್ ಪ್ರೀತ್ ನಾಯಕತ್ವದ ಮೇಲೆ ಹಲವು ಅನುಮಾನವೆದ್ದಿತ್ತು. ಆದರೂ ಕಿವೀಸ್ ಸರಣಿಗೆ ಹರ್ಮನ್ ಅವರನ್ನೇ ನಾಯಕಿಯನ್ನಾಗಿ ಮುಂದುವರಿಸಲಾಗಿದೆ.
“ಹರ್ಮನ್‌ಪ್ರೀತ್ ಕೌರ್ ನಿಗಲ್ ಹೊಂದಿದ್ದು, ಮೊದಲನೇ ಏಕದಿನ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ. ಅವರ ಅನುಪಸ್ಥಿತಿಯಲ್ಲಿ ಸ್ಮೃತಿ ಮಂಧಾನ ತಂಡವನ್ನು ಮುನ್ನಡೆಸಲಿದ್ದಾರೆ” ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಭಾರತ ತಂಡ ಟಾಸ್ ಗೆದ್ದು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ತೇಜಲ್ ಹಸಾಬ್ನಿಸ್ ಮತ್ತು ಸೈಮಾ ಠಾಕೋರ್ ಅವರು ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು.