ಹಾವೇರಿ: ಕಳೆದ ಎರಡು ತಿಂಗಳಿಂದ ಬಿಸಿಲಿನ ತೀವ್ರತೆ, ಮಳೆ ಕೊರತೆಯಿಂದ ತರಕಾರಿ ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತರಕಾರಿ ದರ ಏರಿಕೆ ಕಂಡಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟುವಂತಾಗಿದೆ. ಸ್ಥಳೀಯ ಬಸವೇಶ್ವರ ನಗರದಲ್ಲಿ ರವಿವಾರ ನಡೆದ ತರಕಾರಿ ಸಂತೆಯಲ್ಲಿ ದರ ಏರಿಕೆ ಬಿಸಿ ಜನಸಾಮಾನ್ಯರಿಗೆ ಶಾಕ್ ನೀಡಿತು. ತರಕಾರಿ ದರ ಗಗನಕ್ಕೇರಿದ್ದರಿಂದ ಜನರು ಚೌಕಾಸಿ ಮಾಡಿ ತರಕಾರಿ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.
Advertisement
ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಬಿಸಿಲಿನ ತಾಪ ಜಾಸ್ತಿಯಾಗಿ ತರಕಾರಿ, ಸೊಪ್ಪುಗಳು ಬಾಡಿ ಹೋಗುತ್ತಿವೆ. ಅಂತರ್ಜಲ ಕುಸಿತಗೊಂಡಿದ್ದು, ಸಮರ್ಪಕ ನೀರು ಸಿಗದೇ ರೈತರು ತರಕಾರಿ ಬೆಳೆಯಲು ಮುಂದಾಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಸೋತೆಕಾಯಿ, ಬೀನ್ಸ್, ಟೊಮೆಟೊ, ಹಿರೇಕಾಯಿ, ಮೆಣಸಿನಕಾಯಿ, ಮೆಂತ್ಯ, ಕೊತ್ತಂಬರಿ, ಸಬ್ಬಸಗಿ ಸೊಪ್ಪು ಪೂರೈಕೆ ತೀವ್ರ ಕುಸಿದಿದೆ. ಗುಣಮಟ್ಟವಿಲ್ಲದ ಉತ್ಪನ್ನಗಳಿಗೂ ದುಬಾರಿ ಬೆಲೆ ಇದೆ. ಮಾರುಕಟ್ಟೆಗೆ ಪೂರೈಕೆ ಕಡಿಮೆಯಾದ ಕಾರಣ ಸಹಜವಾಗಿ ದರ ಏರಿಕೆಯಾಗಿದೆ.
Related Articles
Advertisement
ತರಕಾರಿ ಪೂರೈಕೆಯಲ್ಲಿ ಇಳಿಕೆ: ಹಾವೇರಿ ಎಪಿಎಂಸಿಗೆ ಬೆಳಗಾವಿ, ಹುಬ್ಬಳ್ಳಿ ಕಡೆಯಿಂದ ಹೆಚ್ಚಿನ ತರಕಾರಿ ಪೂರೈಕೆಯಾಗುತ್ತದೆ. ಆದರೆ ಈ ಬಾರಿ ಮಳೆ ಕೈಕೊಟ್ಟು ಬರ ಆವರಿಸಿದ್ದರಿಂದ ತರಕಾರಿ ಬೆಳೆಗಳು ಒಣಗಿ ಹೋಗುತ್ತಿವೆ. ಹೀಗಾಗಿ ಸ್ಥಳೀಯ ರೈತರಿಂದ ಮಾರುಕಟ್ಟೆಗೆ ಸಮರ್ಪಕವಾಗಿ ತರಕಾರಿ ಪೂರೈಕೆಯಾಗುತ್ತಿಲ್ಲ. ಆಂಧ್ರ, ತಮಿಳುನಾಡು, ಬೆಳಗಾವಿ ಕಡೆಯಿಂದ ಮೆಣಸಿನಕಾಯಿ, ಕೋಲಾರದಿಂದ ಟೊಮೆಟೊ, ಹುಬ್ಬಳ್ಳಿಯಿಂದ ಈರುಳ್ಳಿ, ಬೆಳ್ಳುಳ್ಳಿ ಆವಕ ಮಾಡಿಕೊಳ್ಳಲಾಗುತ್ತಿದೆ ಎಂದು ತರಕಾರಿ ವ್ಯಾಪಾರಸ್ಥರು ಹೇಳುತ್ತಾರೆ.
ಮಳೆ ಕೊರತೆ ಹಾಗೂ ಬಿಸಿಲಿನ ತೀವ್ರತೆಯಿಂದ ತರಕಾರಿ ಬೆಳೆ ಹಾಳಾಗುತ್ತಿದ್ದು, ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ತರಕಾರಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಸಹಜವಾಗಿ ತರಕಾರಿಗಳ ಬೆಲೆ ಏರಿಕೆ ಕಂಡಿದೆ. ಆಂಧ್ರ, ತಮಿಳುನಾಡು, ಬೆಳಗಾವಿ ಕಡೆಯಿಂದಮೆಣಸಿನಕಾಯಿ, ಕೋಲಾರದಿಂದ ಟೊಮೆಟೊ, ಹುಬ್ಬಳ್ಳಿಯಿಂದ ಈರುಳ್ಳಿ, ಬೆಳ್ಳುಳ್ಳಿ ಆವಕ ಮಾಡಿಕೊಳ್ಳಲಾಗುತ್ತಿದೆ. ಗ್ರಾಹಕರು ತಮಗೆ ಎಷ್ಟು ಬೇಕೋ ಅಷ್ಟು ಖರೀದಿಸುತ್ತಿದ್ದಾರೆ. *ಪ್ರಶಾಂತ ನಿಂಗಪ್ಪಗೌಡ್ರ, ತರಕಾರಿ ವ್ಯಾಪಾರಸ್ಥರು ಬೀನ್ಸ್, ಮೆಣಸಿನಕಾಯಿ ಬೆಲೆ ಏರಿಕೆ..
ಈ ಹಿಂದೆ ಬೀನ್ಸ್ ಕೆಜಿಗೆ 40-50ರೂ.ಗೆ ದೊರೆಯುತ್ತಿತ್ತು ಈಗ ಬಲು ದುಬಾರಿ ಪ್ರತಿ ಕೆಜಿಗೆ 180-200ರೂ.ಗೆ ಮಾರಾಟ ಮಾಡಲಾಗುತ್ತಿದೆ. ಜತೆಗೆ 40ರೂ. ಇದ್ದ ಹಸಿಮೆಣಸಿನಕಾಯಿ ಬೆಲೆ ಕೂಡ ಕೆಜಿಗೆ 100-120ರೂ. ಏರಿಕೆಯಾಗಿದೆ. ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿದೆ.