ಹೊಸದಿಲ್ಲಿ : ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡುವರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಯಾರಿಗೂ ಏನೂ ಖಚಿತವಾಗಿ ಗೊತ್ತಿಲ್ಲ; ಕೇವಲ ಊಹಾಪೋಹಗಳು ಮಾತ್ರ ಗುಲ್ಲೆಬ್ಬಿಸುತ್ತಿವೆ; ಹಾಗಿದ್ದರೂ ಈ ನಡುವೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ‘ರಜನಿಕಾಂತ್ ಅವರಂತಹ ಎಲ್ಲ ಸಜ್ಜನರಿಗೆ ಬಿಜೆಪಿಯ ಬಾಗಿಲು ಸದಾ ತೆರೆದಿರುತ್ತದೆ’ ಎಂದು ಹೇಳಿದ್ದಾರೆ.
ಅಮಿತ್ ಶಾ ಅವರನ್ನು ಉಲ್ಲೇಖೀಸಿ ವರದಿ ಮಾಡಿರುವ ಟಿವಿ ಸುದ್ದಿ ವಾಹಿನಿಯೊಂದು, “ಎಲ್ಲ ಸಜ್ಜನರಿಗೆ ರಾಜಕೀಯ ಸೇರುವುದಕ್ಕೆ ಸ್ವಾಗತವಿದೆ; ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಒಂದೊಮ್ಮೆ ಬಿಜೆಪಿ ಸೇರಲು ಬಯಸಿದರೆ ನಾವು ಅವರನ್ನು ಸ್ವಾಗತಿಸುತ್ತೇವೆ; ತಾವು ಯಾವಾಗ ರಾಜಕೀಯ ರಂಗ ಪ್ರವೇಶಿಸಬೇಕು ಎಂಬುದನ್ನು ರಜನಿಕಾಂತ್ ಅವರೇ ನಿರ್ಧರಿಸಬೇಕು’ ಎಂದು ಅಮಿತ್ ಶಾ ಹೇಳಿರುವುದಾಗಿ ತಿಳಿಸಿದೆ.
ಬಿಜೆಪಿ ಸೇರುವುದಕ್ಕಾಗಿ ರಜನಿಕಾಂತ್ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂಬ ವದಂತಿಯನ್ನು ವೆಂಕಯ್ಯ ನಾಯ್ಡು ಅವರಂತೆ ಅಮಿತ್ ಶಾ ಕೂಡ ತಳ್ಳಿ ಹಾಕಿದ್ದಾರೆ.
ರಜನಿಕಾಂತ್ ಬಿಜೆಪಿ ಸೇರುವ ಬಗ್ಗೆ ತಾನು ಅವರೊಂದಿಗೆ ಮಾತನಾಡಿದ್ದೇನೆ ಎಂಬ ವದಂತಿಗಳನ್ನು ಕೂಡ ಅಮಿತ್ ಶಾ ತಳ್ಳಿ ಹಾಕಿದರು.
ಕಳೆದ ವಾರವಷ್ಟೇ ರಜನಿಕಾಂತ್ ಅವರು “ದೇವರು ಬಯಸಿದರೆ ನಾನು ರಾಜಕೀಯ ಸೇರುವೆನು’ ಎಂದು ಹೇಳಿದ್ದರು. ರಜನಿಕಾಂತ್ ಬಿಜೆಪಿ ಸೇರುವರೆಂಬ ಬಗೆಗಿನ ವದಂತಿಗಳಿಂದ ಅಸಂಖ್ಯ ಬಿಜೆಪಿ ನಾಯಕರು ಪುಳಕಿತರಾಗಿದ್ದರು.