ಬುಲೆಟ್ ಟ್ರೈನ್ ಓಡಿಸುವ ಕನಸು ಕಾಣುತ್ತಿರುವ ನಮಗೆ ಆಹಾರ ಮತ್ತು ನೈರ್ಮಲ್ಯದ ಗುಣಮಟ್ಟವನ್ನು ಸುಧಾರಿಸಲು ಕೂಡ ಸಾಧ್ಯವಾಗಿಲ್ಲ ಎನ್ನುವುದು ನಾಚಿಕೆಯ ಸಂಗತಿ.
ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಪೂರೈಸುವ ಊಟ, ತಿಂಡಿ ಮತ್ತು ಪಾನೀಯಗಳ ಗುಣಮಟ್ಟದ ಕುರಿತು ಮಹಾಲೇಖಪಾಲರು ಮಂಡಿಸಿರುವ ವರದಿ ಬೆಚ್ಚಿ ಬೀಳಿಸುವಂತಿದೆ. ನಿತ್ಯ ಲಕ್ಷಾಂತರ ಜನರು ಪ್ರಯಾಣಿಸುವ ರೈಲ್ವೇಯಲ್ಲಿ ಒದಗಿಸುವ ಆಹಾರ ಮನುಷ್ಯರು ಸೇವಿಸಲು ಲಾಯಕ್ಕಲ್ಲ ಎಂದು ಮಹಾಲೇಖಪಾಲರು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ರೈಲ್ವೇ ಆಹಾರದ ಗುಣಮಟ್ಟ ಕಳಪೆ ಎನ್ನುವುದು ಹೊಸ ವಿಷಯವೇನಲ್ಲ. ಆಹಾರದಲ್ಲಿ ನೊಣ, ಜಿರಳೆ, ಹಲ್ಲಿ ಸಿಗುವಂತಹ ಪ್ರಕರಣಗಳು ಆಗಾಗ ವರದಿಯಾಗಿರುತ್ತವೆ. ಆದರೆ ರೈಲ್ವೇ ಆಹಾರ ಈ ಪರಿ ಕೆಟ್ಟು ಹೋಗಿದೆ ಎನ್ನುವುದು ವರದಿಯಿಂದ ತಿಳಿದು ಬಂದಿದೆ. ರೈಲ್ವೇ ಆಹಾರ ಮಾತ್ರವಲ್ಲದೆ ರೈಲಿನ ಸ್ವತ್ಛತೆ, ತ್ಯಾಜ್ಯ ವಿಲೇವಾರಿ ಮತ್ತಿತರ ವಿಚಾರಗಳ ಮೇಲೂ ವರದಿ ಬೆಳಕು ಚೆಲ್ಲಿದೆ. ಜಪಾನ್, ಚೀನ ಮತ್ತಿತರ ಮುಂದುವರಿದ ದೇಶಗಳಲ್ಲಿರುವ ಹೈಸ್ಪೀಡ್ ರೈಲು, ಬುಲೆಟ್ ಟ್ರೈನ್ ಓಡಿಸುವ ಕನಸು ಕಾಣುತ್ತಿರುವ ನಮಗೆ ತೀರಾ ಮೂಲಭೂತ ವಿಷಯವಾಗಿರುವ ಆಹಾರ ಮತ್ತು ನೈರ್ಮಲ್ಯದ ಗುಣಮಟ್ಟವನ್ನು ಸುಧಾರಿಸಲು ಕೂಡ ಸಾಧ್ಯವಾಗಿಲ್ಲ ಎನ್ನುವುದು ನಾಚಿಕೆಯ ಸಂಗತಿ. ಪ್ರಧಾನಿ ಮೋದಿಯೇ ಮುತುವರ್ಜಿ ವಹಿಸಿ ಆರಿಸಿರುವ ರೈಲ್ವೇ ಸಚಿವ ಸುರೇಶ್ ಪ್ರಭು ರೈಲು ಪ್ರಯಾಣವನ್ನು ಸುಖಕರ ಮಾಡಲು ಹತ್ತಾರು ಕ್ರಮ ಕೈಗೊಂಡಿದ್ದರೂ ಯಾವುದೂ ನಿರೀಕ್ಷಿತ ಫಲ ನೀಡುತ್ತಿಲ್ಲ ಎನ್ನುತ್ತಿದೆ ಈ ವರದಿ.
ರೈಲಿನಲ್ಲಿ ಪೂರೈಸುವ ಹಾಲು, ಪಾನೀಯಗಳು, ಸ್ಯಾಂಡ್‌ವಿಚ್, ಬಿಸ್ಕತ್ ಮತ್ತಿತರ ತಿಂಡಿಗಳು ರುಚಿಯಲ್ಲಿ ಕಳಪೆ ಮಾತ್ರವಲ್ಲ, ಕನಿಷ್ಠ ಮಟ್ಟದ ನೈರ್ಮಲ್ಯವನ್ನೂ ಹೊಂದಿಲ್ಲ. ಇನ್ನು ಊಟ ಹಾಗೂ ಕರಿದ ತಿಂಡಿಗಳ ವಿಚಾರ ಹೇಳದಿರುವುದೇ ಒಳ್ಳೆಯದು. ರುಚಿ ಮತ್ತು ಶುಚಿಯನ್ನು ಬಿಟ್ಟು ಉಳಿದೆಲ್ಲವನ್ನು ಈ ಆಹಾರ ಪದಾರ್ಥಗಳು ಒಳಗೊಂಡಿವೆ. ಹೀಗಾಗಿ ಇದು ಮನುಷ್ಯರಿಗೆ ತಿನ್ನಲು ಯೋಗ್ಯವಾದುದಲ್ಲ ಎಂದು ಸಿಎಜಿ ಕಂಡುಕೊಂಡಿದೆ. ರೈಲ್ವೇ ಪೂರೈಸುವ ಬಾಟಲಿ ನೀರು ನಿರ್ದಿಷ್ಟ ಗುಣಮಟ್ಟವನ್ನು ಹೊಂದಿಲ್ಲ. ರೈಲ್ವೇ ನಿಲ್ದಾಣಗಳಲ್ಲಿ ಮತ್ತು ಪ್ಯಾಂಟ್ರಿಗಳಲ್ಲಿ ಚಹಾ, ಕಾಫಿ, ಸೂಪ್, ಜ್ಯೂಸ್ ಮತ್ತಿತರ ಪಾನೀಯಗಳನ್ನು ತಯಾರಿಸಲು ಕೊಳಕು ನೀರು ಉಪಯೋಗಿಸುತ್ತಾರೆ. ಮಾರಾಟವಾಗದೆ ಉಳಿದ ಆಹಾರ ಮತ್ತು ಪಾನೀಯಗಳನ್ನು ಸಂಸ್ಕರಿಸಿ ಮತ್ತೆ ಮಾರಾಟ ಮಾಡುತ್ತಿರುವುದನ್ನು ಸಿಎಜಿ ಪತ್ತೆ ಹಚ್ಚಿ ವರದಿ ಮಾಡಿದೆ. ರೈಲುಗಳು ಮತ್ತು ನಿಲ್ದಾಣಗಳ ಸ್ವತ್ಛತೆಯೂ ನಿರೀಕ್ಷಿತ ಮಟ್ಟದಲ್ಲಿಲ್ಲ. ರೈಲುಗಳ ಕಸದ ಡಬ್ಬಿಯನ್ನು ನಿಯಮಿತವಾಗಿ ಸ್ವತ್ಛ ಮಾಡುತ್ತಿಲ್ಲ. ಅಂತೆಯೇ ರೈಲುಗಳು ಕೂಡ ಸ್ವತ್ಛವಾಗಿಲ್ಲ. ಜಿರಳೆ, ಇಲಿ ಹೆಗ್ಗಣಗಳು ರೈಲುಗಳಲ್ಲಿ ಸಾಮಾನ್ಯ. ಇಷ್ಟು ಮಾತ್ರವಲ್ಲದೆ ರೈಲ್ವೇ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರವನ್ನು ವಸೂಲು ಮಾಡುತ್ತಿರುವುದು ಕೂಡ ಸಿಎಜಿ ಪರಿಶೀಲನೆ ವೇಳೆ ಪತ್ತೆಯಾಗಿದೆ. ರೈಲ್ವೇ ಒದಗಿಸುವ ಹೊದಿಕೆ ಕೊಳಕಾಗಿರುತ್ತದೆ. ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯಬೇಕು ಎಂಬ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ರೈಲ್ವೇಯ ಕ್ಯಾಟರಿಂಗ್ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಲುವಾಗಿಯೇ ಐಆರ್‌ಸಿಟಿಸಿ ಎಂಬ ಸಂಸ್ಥೆಯಿದೆ. ಆಹಾರ ಮತ್ತು ಪಾನೀಯಗಳ ಗುಣಮಟ್ಟ ಮತ್ತು ದರವನ್ನು ಐಆರ್‌ಸಿಟಿಸಿ ನಿರ್ಧರಿಸುತ್ತದೆ. ಆದರೆ ಸಿಎಜಿ ವರದಿ ಹಿನ್ನೆಲೆಯಲ್ಲಿ ಹೇಳುವುದಾದರೆ ಐಆರ್‌ಸಿಟಿಸಿ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ.
ರೈಲುಗಳ ಸಮಯ ಪಾಲನೆಯ ಮೇಲೂ ಸಿಎಜಿ ದೃಷ್ಟಿ ಹರಿಸಿದೆ. ಭಾರತದ ರೈಲುಗಳು ಸಮಯಕ್ಕೆ ಸರಿಯಾಗಿ ಬಂದರೆ ಅದು ಅದ್ಭುತ ವಿಷಯ. ರೈಲುಗಳ ಸಮಯದ ಕುರಿತು ದೇಶದಲ್ಲಿ ನೂರಾರು ಜೋಕುಗಳೇ ಇವೆ. ಸಿಎಜಿ ವರದಿ ಇದನ್ನು ಸಮರ್ಥಿಸಿದೆ. ಸೂಪರ್‌ಫಾಸ್ಟ್ ರೈಲುಗಳು ಕೂಡ ಸಮಯಕ್ಕೆ ಸರಿಯಾಗಿ ಗಮ್ಯ ತುಲುಪುವುದಿಲ್ಲ. ಪ್ರಯಾಣಿಕರಿಂದ ರೈಲ್ವೇ ಸೂಪರ್‌ಪಾಸ್ಟ್ ಸರ್ಚಾರ್ಜ್ ಸಂಗ್ರಹಿಸುತ್ತದೆ. ಆದರೆ ರೈಲುಗಳು ಮಾತ್ರ ತಡವಾಗಿ ತಲುಪುತ್ತವೆ. ಇದು ಒಂದು ರೀತಿಯಲ್ಲಿ ಪ್ರಯಾಣಿಕರ ಹಗಲು ದರೋಡೆ. ಈ ಎಲ್ಲ ವಿಷಯಗಳು ಬಯಲಾದ ಬಳಿಕ ಎಚ್ಚೆತ್ತುಕೊಂಡಿರುವ ರೈಲ್ವೇ ಆಹಾರ ಗುಣಮಟ್ಟವನ್ನು ಸುಧಾರಿಸಲು ಹೊಸ ನೀತಿಯೊಂದನ್ನು ರೂಪಿಸಿದೆ. ಕನಿಷ್ಠ ಇನ್ನಾದರೂ ರೈಲು ಪ್ರಯಾಣಿಕರಿಗೆ ಉತ್ತಮ ಆಹಾರ ಸಿಗಲಿ.