ಪಾಂಡವಪುರ: ಜಿಲ್ಲೆಯ ರೈತರ ಮಕ್ಕಳಿಗೆ ಹೈಟೆಕ್ ವಸತಿ ಶಾಲೆ, ವಿದ್ಯಾಂವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳದ ಮೂಲಕ ಅರ್ಹತೆಗೆ ತಕ್ಕಂತೆ ಕೆಲಸ, ಉಚಿತ ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಮುರುಗೇಶ್ ನಿರಾಣಿ ಭರವಸೆ ನೀಡಿದರು.
ತಾಲೂಕಿನ ಪಿಎಸ್‌ಎಸ್‌ಕೆ ಕಾರ್ಖಾನೆ ಆಡಳಿತ ಕಚೇರಿ ಸಭಾಂಗಣದಲ್ಲಿ ತಾಲೂಕು ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕದಿಂದ ಪಿಎಸ್‌ಎಸ್‌ಕೆ ಗುತ್ತಿಗೆದಾರ ಶಾಸಕ ಮುರುಗೇಶ್ ನಿರಾಣಿಯವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ನಾನು ರೈತ ಕುಟುಂಬದಿಂದ ಬಂದವನ್ನು, ಇಂದಿಗೂ ನನ್ನ ಕುಟುಂಬಸ್ಥರು ಬೇಸಾಯವನ್ನೇ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ನಮ್ಮ ಮನೆಯವರು ಯಾರೂ ಸಹ ಎಸ್‌ಎಸ್‌ಎಲ್ ಸಿಯೂ ಪಾಸ್ ಆಗಿಲ್ಲ, ಮಗ ರಾಜಕೀಯ, ಉದ್ಯಮ ಕ್ಷೇತ್ರದಲ್ಲಿ ಬೆಳೆದಿದ್ದರೂ ನನ್ನ ತಂದೆ ಇಂದಿಗೂ ಸಹ ಬೇಸಾಯವನ್ನು ಬಿಟ್ಟಿಲ್ಲ ಎಂದು ತಿಳಿಸಿದರು.
ಕಾರ್ಖಾನೆ ಅಭಿವೃದ್ಧಿ: ಕಾರ್ಖಾನೆ ಗುತ್ತಿಗೆಪಡೆದುಕೊಳ್ಳುವ ಸಂದರ್ಭದಲ್ಲಿ ಕಾರ್ಖಾನೆಯಲ್ಲಿನ ಕೆಲವು ಯಂತ್ರಗಳು ತುಕ್ಕುಹಿಡಿದು, ದುರಸ್ತಿಗೊಂಡಿವೆ. ಕಾರ್ಖಾನೆ ನಡೆಸಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದರು. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳಲಿಲ್ಲ. ಕಾರ್ಖಾನೆಯೊಂದಿಗೆ ಮದುವೆಯಾಗಿದೆ. ಅದಕ್ಕೆ ಡೈವರ್ ಕೊಡಲು ಸಾಧ್ಯವಿಲ್ಲ, ಏನೇ ಕಷ್ಟಬಂದರೂ ಸಹ ಕಾರ್ಖಾನೆಯನ್ನು ಅಭಿವೃದ್ಧಿಸುತ್ತೇನೆ ಎಂದರು.
ಉದ್ಯಮ ಕ್ಷೇತ್ರ ಮೊದಲ ಆಯ್ಕೆ: ರಾಜಕೀಯಕ್ಕಿಂತ ಉದ್ಯಮ ಕ್ಷೇತ್ರವೇ ನನ್ನ ಮೊದಲ ಆಯ್ಕೆ. ಕಾರ್ಖಾನೆಯ ಒಳಗೆ ಯಾವುದೇ ರಾಜಕೀಯ, ಜಾತಿ, ಧರ್ಮ ಪರಿಗಣಿಸಲ್ಲ. ಹೊರಗೆ ನಾನು ನಿಮ್ಮವನೇ ನಿಜಕ್ಕೂ ವೀರಶೈವ ಮುಖಂಡರು ಅಭಿನಂದಿಸಿದಕ್ಕೆ ತುಂಬಾ ಖುಷಿಯಾಗಿದೆ. ಸಮುದಾಯದ ಯುವಕರಿಗೆ ಉದ್ಯೋಗ ನೀಡುವಂತೆ ಮನವಿ ಮಾಡಿದ್ದೀರಾ. ಸಾಧ್ಯವಾದಷ್ಟು ನಾನು ಸಹಾಯ ಮಾಡುತ್ತೇನೆ. ಹತ್ತಕ್ಕೆ ಐದನ್ನಾದರೂ ನೀಡುತ್ತೇನೆ. ಮುಂದಿನ ದಿನಗಳಲ್ಲಿ ನೀವು ಕರೆದರೆ ನಿಮ್ಮ ಮನೆ, ಹಬ್ಬಕ್ಕೂ ಪಾಲ್ಗೊಳುತ್ತೇನೆ. ಕಾರ್ಖಾನೆಯ ಆಧುನೀಕರಣ ನಡೆಯುತ್ತಿದೆ, ಪ
ರಿಣಿತ ತಂತ್ರಜ್ಞರು ಬಂದು ಕೆಲಸ ಮಾಡುತ್ತಿದ್ದಾರೆ. ಶೀಘ್ರವೇ ಕಾರ್ಖಾನೆಯನ್ನು ಚಾಲನೆ ಗೊಳಿಸಲಾಗುವುದು ಎಂದು ತಿಳಿಸಿದರು. ವೀರಶೈವ ಸಮುದಾಯದ ತಾಲೂಕು ಅಧ್ಯಕ್ಷ ನಿರಂಜನ ಬಾಬು, ಹಿರಿಯ ಮುಖಂಡ ದೇವಪ್ಪ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಂ.ಎಸ್. ಮಂಜುನಾಥ್, ವಿಜಯಕುಮಾರ್, ಆನುವಾಳು ನಾಗರಾಜು, ಕೆ.ಎಲ್.ಆನಂದ್, ಕೈಲಾಸ್, ಕನ್ನಡ ಸೇನೆ ತಾಲೂಕು ಅಧ್ಯಕ್ಷ ದೇವು, ಶ್ರೀರಂಗಪಟ್ಟಣ ಅಧ್ಯಕ್ಷ ಶಿವರಾಜು ಹಾಜರಿದ್ದರು.