ಪಾಂಡವಪುರ: ನಾಲ್ಕು ತಿಂಗಳ ಹಿಂದೆ ತಾವೇ ನಾಟಿ ಮಾಡಿ ಹೋಗಿದ್ದ ಭತ್ತ ಸಮೃದ್ಧವಾಗಿ ಬೆಳೆದು ನಿಂತಿರುವುದನ್ನು ಕಂಡು ಹರ್ಷಚಿತ್ತರಾದ ಕುಮಾರಸ್ವಾಮಿ, ಶುಕ್ರವಾರ ಸೀತಾಪುರ ಗ್ರಾಮದಲ್ಲಿ ಕೊಯ್ಲಿಗೆ ಚಾಲನೆ ನೀಡಿದರು.
ಸೀತಾಪುರದ ಯೋಗೇಂದ್ರಗೆ ಸೇರಿದ್ದ ಒಂದೂವರೆ ಎಕರೆ ಹಾಗೂ ಡಿ.ದೇವರಾಜು ಎಂಬುವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಭತ್ತದ ಕೊಯ್ಲು ಮಾಡಲಾಯಿತು. ಕೊಯ್ಲಿಗಾಗಿ ಕುಮಾರಸ್ವಾಮಿ ಮತ್ತು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಹಿತ್ತಾಳೆಯ ಕುಡುಗೋಲನ್ನು ವಿಶೇಷವಾಗಿ ಸಿದಟಛಿಪಡಿಸಲಾಗಿತ್ತು. 60 ಗಂಡಾಳುಗಳು ಹಾಗೂ 25 ಹೆಣ್ಣಾಳುಗಳು ಮುಖ್ಯಮಂತ್ರಿಗೆ ಸಾಥ್ ನೀಡಿದರು.
ಸಂಜೆ 6 ಗಂಟೆಗೆ ಗದ್ದೆಗಿಳಿದು ಭತ್ತ ಕೊಯ್ಲಿಗೆ ಚಾಲನೆ ನೀಡಿದ ಕುಮಾರಸ್ವಾಮಿ, 6.04 ನಿಮಿಷಕ್ಕೆ ಭತ್ತದ ರಾಶಿಗೆ ಪೂಜೆ ಸಲ್ಲಿಸಿದರು.
ಸಿಎಂ ಅವರಿಂದ ಕೊಯ್ಲು ಪ್ರಕ್ರಿಯೆ ನಡೆಸಿ ರಾಶಿ ಪೂಜೆ ಮಾಡಲು ಹೆಚ್ಚು ಸಮಯವಾಗಲಿದೆ ಎಂಬ ಕಾರಣಕ್ಕಾಗಿ ಬೆಳಗ್ಗೆಯೇ ಯಂತ್ರದ ಮೂಲಕ ಮೂರು ಎಕರೆ ಪ್ರದೇಶದ ಭತ್ತವನ್ನು ಕಟಾವು ಮಾಡಿ, ಒಕ್ಕಣೆ ಮಾಡಲಾಗಿತ್ತು. ಭತ್ತದ ರಾಶಿಯನ್ನು ಸೇವಂತಿಗೆ ಹೂವು, ಬಾಳೆ ದಿಂಡು, ಕಬ್ಬಿನ ತೊಂಡೆಗಳಿಂದ ಸಿಂಗರಿಸಲಾಗಿತ್ತು. ಭತ್ತದ ರಾಶಿಯ ಪಶ್ಚಿಮ ಭಾಗದ ಕೊಳಗ ಮತ್ತು ಬಳ್ಳದಲ್ಲಿ ಭತ್ತವನ್ನು ತುಂಬಿ ಇಡಲಾಗಿತ್ತು. ಅವುಗಳಿಗೂ ಸಿಎಂ ಪೂಜೆ ಸಲ್ಲಿಸಿದರು. ಭತ್ತದ ಕೊಯ್ಲಿಗೆ ಆಗಮಿಸಿದ ಸಿಎಂಗೆ ಸಿಹಿ ಪೊಂಗಲ್, ಮೊಸರನ್ನ ತಯಾರಿಸಿ ಅಡಕೆ ತಟ್ಟೆಯಲ್ಲಿ ನೀಡಲಾಯಿತು.
ಅಮಾವಾಸ್ಯೆಯಿಂದ ಅಮಾವಾಸ್ಯೆವರೆಗೆ: ಸಿಎಂ ಭತ್ತ ನಾಟಿ ಮಾಡಿದ ಆ.11 ಅಮಾವಾಸ್ಯೆ ದಿನ. ಈಗ ಭತ್ತ ಕೊಯ್ಲು ಮಾಡಿದ ಡಿ.7 ಕೂಡ ಅಮಾವಾಸ್ಯೆಯೇ ಎನ್ನುವುದು ವಿಶೇಷ. ಆ.11ರ ಅಮಾವಾಸ್ಯೆಯಂದು ಅವರು ಆದಿ ಚುಂಚನಗಿರಿಯಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಪಾಂಡವಪುರದ ಸೀತಾಪುರ ಗ್ರಾಮಕ್ಕೆ ಆಗಮಿಸಿ, ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಡಿ.7ರ ಅಮಾವಾಸ್ಯೆ ದಿನ ಶೃಂಗೇರಿಯ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಭತ್ತ ಕೊಯ್ಲಿಗೆ ಚಾಲನೆ ನೀಡಿದರು.