ಬಸವನಬಾಗೇವಾಡಿ: ತಾಯಿ ಮತ್ತು ಗೋಮಾತೆಯನ್ನು ಪೂಜಿಸುವ ಮೂಲಕ ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಿಬೇಕಿದೆ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ಹೇಳಿದರು.
ಮಂಗಳವಾರ ಪಟ್ಟಣದ ವಿಜಯಪುರ ರಸ್ತೆಯ ಅಯ್ಯಪ್ಪ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಹಮ್ಮಿಕೊಂಡಿದ್ದ ಹನುಮಾನ್ ಮಾಲಾ ಕಾರ್ಯಕ್ರಮದ ಹನುಮಾನ ಪಾದುಕೆ ಪಲ್ಲಕ್ಕಿ ಉತ್ಸವ ಹಾಗೂ ಮಾತೃಶಕ್ತಿ ದುರ್ಗಾವಾಹಿನಿ ಶೋಭಾಯಾತ್ರೆ, ರಾಮಾಂಜನೆಯ ರಥಯಾತ್ರೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭಾರತದಲ್ಲಿ ಹಿಂದೂ ಯುವತಿಯರನ್ನು ಲವ್ ಜಿಹಾದ್ ಮೂಲಕ ಮತಾಂತರ ಮಾಡುವ ಕೆಲಸ ನಡೆಯುತ್ತಿದೆ. ಹಿಂದೂ ಯುವಕರು ಗೋಮಾತೆ ಹತ್ಯೆ, ಲವ್ ಜಿಹಾದ್ ಮತಾಂತರ ಮಾಡುವ ಸಂಪ್ರದಾಯಕ್ಕೆ ಕಡಿವಾಣ ಹಾಕುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಭಜರಂಗ ದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಮಾತನಾಡಿ, ಭಜರಂಗದಳ ಹಿಂದೂ ಧರ್ಮವನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಹೊರತು ಈ ದೇಶದ ಮುಸ್ಲಿಂ, ಕ್ರಿಶ್ಚಿಯನ್ ವಿರೋಧಿ ಸಂಘಟನೆಯಲ್ಲ ಎಂದರು.
ಭಜರಂಗ ದಳ ಹುಟ್ಟಿದ್ದೆ ಹಿಂದೂಗಳ ರಕ್ಷಣೆಗಾಗಿ. ದೇಶದಲ್ಲಿ ಲವ್ ಜಿಹಾದ್, ಗೋಹತ್ಯೆ, ಮತಾಂತರ, ರಾಷ್ಟ್ರದ್ರೋಹಿಗಳ ವಿರುದ್ಧ ನಿರಂತರವಾಗಿ ಭಜರಂಗ ದಳ ಹೋರಾಟ ಮಾಡುತ್ತಿದೆ. ಹಿಂದೂಗಳ ರಕ್ಷಣೆಗೆ ಯಾವ ಸರ್ಕಾರವು ಕೂಡಾ ಮಾಡಿಲ್ಲ. ನಾವು ಹಿಂದೂಗಳಿಗಾಗಿ ಹಿಂದೂಗಳ ರಕ್ಷಣೆಗೆ ಕಂಕಣಬದ್ದವಾಗಿ ಹೋರಾಟ ಮಾಡುತ್ತಿದ್ದೇವೆ. ದೇಶದಲ್ಲಿ 52 ಸಾವಿರ ಘಟಕಗಳು ತನ್ನ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮಂದಿರ ನಿರ್ಮಾಣಕ್ಕೆ ಹಲವಾರು ವರ್ಷಗಳ ಕಾಲ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸತ್ಯಕ್ಕೆ, ಧರ್ಮಕ್ಕೆ ಕೊನೆಗೂ ಜಯ ಸಿಕ್ಕಿದೆ. ವಿಶ್ವ ಹಿಂದೂ ಪರಿಷತ್ ತಾಲೂಕು ಗೌರವಾಧ್ಯಕ್ಷ ಎಸ್.ವಿ. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಗೊಳಸಂಗಿ, ಶರಣು ವಾಡೇದ, ಸಾವಿತ್ರಿ ಕಲ್ಯಾಣಶೆಟ್ಟಿ ಸೇರಿದಂತೆ ಅನೇಕರು ಇದ್ದರು. ರಾಜಶೇಖರ ಪಾಟೀಲ ನಿರೂಪಿಸಿದರು.