Advertisement

ತೀರ್ಪು ಸ್ವಾಗತಿಸಿ ರಾಮನಿಗೆ ಪೂಜೆ

10:47 AM Nov 10, 2019 | Suhan S |

ಧಾರವಾಡ: ಅಯೋಧ್ಯೆ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ನಗರದ ಮಾಳಮಡ್ಡಿಯ ಶ್ರೀರಾಮ ಮಂದಿರ, ಲೈನ್‌ ಬಜಾರದ ಶ್ರೀರಾಮ ಮಂದಿರ ಸೇರಿದಂತೆ ನಗರದ ಇನ್ನಿತರ ಶ್ರೀರಾಮ ಮಂದಿರ, ಹನುಮ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Advertisement

ಪ್ರತಿಬಂಧಕಾಜ್ಞೆ ಜಾರಿ ಮಾಡಿದ್ದರಿಂದ ತೀರ್ಪಿನ ಪರವಾಗಿ ಸಂಭ್ರಮಾಚರಣೆ, ವಿಜಯೋತ್ಸವಕ್ಕೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಸಕ ಅರವಿಂದ ಬೆಲ್ಲದ, ಆರೆಸ್ಸೆಸ್‌ ಮುಖಂಡ ಶ್ರೀಧರ ನಾಡಿಗೇರ ಲೈನ್‌ ಬಜಾರದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದಲ್ಲದೇ ಮಾಳಮಡ್ಡಿಯ ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀರಾಮ ಸೇನಾ, ಭಜರಂಗದಳ, ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಹಿಂದೂ ಪರ ಸಂಘಟನೆಗಳು ರಾಮಮಂದಿರ ಹಾಗೂ ಹನಮ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪರಸ್ಪರ ಸಿಹಿ ಹಂಚಿಕೊಂಡರು.

ಸಹಜ ಸ್ಥಿತಿ: ಅವಳಿನಗರದ ಪ್ರಮುಖ ರಸ್ತೆಗಳು, ಸೂಕ್ಷ್ಮ-ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಹೀಗಾಗಿ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮಾರುಕಟ್ಟೆ ಎಂದಿನಂತೆ ಕಾರ್ಯ ನಿರ್ವಹಿಸಿದರೂ ಜನದಟ್ಟಣೆ ಇರಲಿಲ್ಲ. ನಗರ-ಗ್ರಾಮೀಣದಲ್ಲಿ ಸಾರಿಗೆ ಸಂಚಾರ ಸಹಜ ಸ್ಥಿತಿಯಲ್ಲಿತ್ತು. ಆದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಮುಖವಾಗಿತ್ತು. ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿತ್ತು. 2ನೇ ಶನಿವಾರದ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳೂ ಬಾಗಿಲು ಮುಚ್ಚಿದ್ದವು.

ಜಿಲ್ಲಾಡಳಿತದಿಂದ ಕಟ್ಟೆಚ್ಚರ: ಅಯೋಧ್ಯೆ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಜಿಲ್ಲಾಡಳಿತವು ಪ್ರತಿಬಂಧಕಾಜ್ಞೆ ಜಾರಿಗೊಳಿದೆ. ಜಿಲ್ಲಾದ್ಯಂತ ಶಾಂತಿ, ಸುವ್ಯವಸ್ಥೆ ಕಾಪಾಡಲು ನ. 9ರಂದು ಬೆಳಗ್ಗೆ 6ರಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ನ. 10ರಂದು ಬೆಳಗ್ಗೆ 6 ಗಂಟೆಯವರೆಗೆ ಕಲಂ144ರ ಅನ್ವಯ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಡಿಸಿ ದೀಪಾ ಚೋಳನ್‌ ಆದೇಶ ಹೊರಡಿಸಿದ್ದಾರೆ.

Advertisement

ಇದಲ್ಲದೇ ನ. 10ರಂದು ಈದ್‌ ಮಿಲಾದ್‌ ಆಚರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಿತದೃಷ್ಟಿಯಿಂದ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 21ರ ಪ್ರಕಾರ ನ. 9ರ ಬೆಳಗ್ಗೆ 6 ಗಂಟೆಯಿಂದ ನ. 11ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯಪಾನ, ಮದ್ಯ ಮಾರಾಟ ಹಾಗೂ ಸಾಗಾಣಿಕೆ ನಿಷೇಧಿಸಿಯೂ ಆದೇಶ ಹೊರಡಿಸಿದ್ದಾರೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿ ದೀಪಾ ಚೋಳನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next