Advertisement

ಪೂಜಾ ಸ್ಥಳ ಓಪನ್‌; ಪ್ರವಾಸಿ ತಾಣ ಲಾಕ್‌

10:44 AM Jun 09, 2020 | Suhan S |

ಬಾಗಲಕೋಟೆ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಿಂದ ಬಾಗಿಲು ಹಾಕಿರುವ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಜಿಲ್ಲೆಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿ ತಾಣ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ.

Advertisement

ಪ್ರವಾಸಿ ತಾಣವಾದ ಪಟ್ಟದಕಲ್ಲ, ರಾಷ್ಟ್ರೀಯ ತಾಣವಾಗಿರುವ ಬಾದಾಮಿ, ಐಹೊಳೆ ಸಹಿತ ಜಿಲ್ಲೆಯ ಪ್ರವಾಸಿ ತಾಣಗಳನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿಸಿಲ್ಲ. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಪ್ರವಾಸಿಗರೂ ಸದ್ಯಕ್ಕೆ ಅಷ್ಟೊಂದು ಬರುತ್ತಿಲ್ಲ. ಅಲ್ಲದೇ ಜನರು ಒಂದೆಡೆ ಗುಂಪು ಗುಂಪಾಗಿ ಸೇರುವ ಸಾಧ್ಯತೆ ಇರುವುದರಿಂದ ಪ್ರವಾಸಿ ತಾಣಗಳನ್ನು ಸದ್ಯ ಪ್ರವಾಸಿಗರಿಗೆ ಮುಕ್ತವಾಗಿಸಲು ಪರವಾನಗಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಪೂಜಾಸ್ಥಳ ಓಪನ್‌: ಜಿಲ್ಲೆಯ ಪ್ರವಾಸಿ ತಾಣಗಳ ಪೈಕಿ ಮಹಾಕೂಟ, ಬನಶಂಕರಿ ಮುಂತಾದ ಸ್ಥಳಗಳನ್ನು ಪ್ರವಾಸಿ ತಾಣಗಳ ಜತೆಗೆ ಪೂಜಾಸ್ಥಳವೆಂದು ಗುರುತಿಸಲ್ಪಟ್ಟಿದ್ದು, ಅವುಗಳನ್ನು ಸೋಮವಾರದಿಂದ ಆರಂಭಿಸಲಾಗಿದೆ. ಬನಶಂಕರಿ, ಮಹಾಕೂಟದಲ್ಲಿ ಪವಿತ್ರ ಪುಷ್ಕರಣಿಗಳಿದ್ದು, ಅವುಗಳಲ್ಲಿ ಪುಣ್ಯ ಸ್ನಾನವೂ ಸದ್ಯಕ್ಕೆ ನಿಷೇಧಿಸಲಾಗಿದೆ. ಕೇವಲ ಭಕ್ತರು, ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಲು ಮಾತ್ರ ಅವಕಾಶವಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ. ಬನಶಂಕರಿ, ಮಹಾಕೂಟದ ಜತೆಗೆ ಜಿಲ್ಲೆಯ ಕೂಡಲಸಂಗಮದ ಸಂಗಮನಾಥ ದೇವಾಲಯ, ತುಳಸಿಗೇರಿಯ ತುಳಸಿಗಿರೀಶ ದೇವಾಲಯ, ಮಂಟೂರ, ಮಹಾಲಿಂಗಪುರದ ಮಹಾಲಿಂಗೇಶ್ವರ, ತೇರದಾಳ ಅಲ್ಲಮಪ್ರಭು ದೇವಾಲಯ, ಬಾಗಲಕೋಟೆಯ ಹೊಳೆಆಂಜನೇಯ ದೇವಾಲಯ, ವೆಂಕಪ್ಪನ ದೇವಾಲಯ ಹೀಗೆ ಜಿಲ್ಲೆಯಾದ್ಯಂತ ಹಲವು ಪೂಜಾಸ್ಥಳಗಳು ಸೋಮವಾರದಿಂದ ಆರಂಭಗೊಂಡಿವೆ.

ಪ್ರವಾಸಿ ಗೈಡ್‌ಗಳಿಗೆ ಸಮಸ್ಯೆ: ಕಳೆದ ಮಾರ್ಚ್‌ನಿಂದ ಪ್ರವಾಸಿ ತಾಣಗಳ ಬಾಗಿಲು ಹಾಕಿದ್ದು, ಪ್ರವಾಸಿಗರಿಗೆ ಇಲ್ಲಿನ ತಾಣಗಳ ಕುರಿತು ಮಾಹಿತಿ ನೀಡಿ, ಅದರಿಂದ ಬರುವ ಅಲ್ಪ ಹಣದಲ್ಲಿಯೇ ಬದುಕು ನಡೆಸುತ್ತಿದ್ದ ಜಿಲ್ಲೆಯ ಪ್ರವಾಸಿ ಗೈಡ್‌ಗಳಿಗೆ ತೀವ್ರ ತೊಂದರೆಯಾಗಿದೆ. ಕೋವಿಡ್ ಭೀತಿಯಿಂದ ಪ್ರವಾಸಿ ತಾಣಗಳು ಬಾಗಿಲು ಹಾಕಿವೆ. ಇದರಿಂದ ಪ್ರವಾಸಿಗರೂ ಬರುತ್ತಿಲ್ಲ. ಗೈಡ್‌ ಗಳಿಗೆ ಕೆಲಸವಿಲ್ಲದೇ ತೀವ್ರ ತೊಂದರೆಯಾಗಿದೆ. ಸರ್ಕಾರ ಪ್ರವಾಸಿ ಗೈಡ್‌ಗಳಿಗೆ ವಿಶೇಷ ಸಹಾಯಧನ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next