Advertisement

ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ಪವನಸುತನ ಆರಾಧನೆ

10:14 AM Apr 17, 2022 | Team Udayavani |

ಧಾರವಾಡ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹನುಮ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಹನುಮ ಜಯಂತಿ ಶನಿವಾರವೇ ಬಂದ ಕಾರಣ ಈ ಸಲ ಮತ್ತಷ್ಟು ಸಂಭ್ರಮದಿಂದ ಆಚರಿಸಿದ್ದು, ಭಕ್ತರ ಉತ್ಸಾಹ ಇಮ್ಮಡಿಗೊಂಡಿತ್ತು.

Advertisement

ನುಗ್ಗಿಕೇರಿ ದೇವಸ್ಥಾನದಲ್ಲಿ ಬೆಳಗಿನ ಜಾವ 4ರಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭಗೊಂಡವು. ಅಭಿಷೇಕ, ಅಲಂಕಾರದ ಬಳಿಕ 6:11 ಗಂಟೆಗೆ ಹನುಮಂತ ದೇವರಿಗೆ ತೊಟ್ಟಿಲೋತ್ಸವ ಸೇವೆ ನಡೆಯಿತು. ಬೆಳಗ್ಗೆ 11 ಗಂಟೆಗೆ ರಥೋತ್ಸವ ಜರುಗಿತು.

ಆ ನಂತರ ತೀರ್ಥ ಪ್ರಸಾದ ಕಾರ್ಯಕ್ರಮಗಳು ಸಾಂಗವಾಗಿ ಜರುಗಿದವು. ದೇವಸ್ಥಾನ ಆವರಣದಲ್ಲಿ ಯಾವುದೇ ಸಮುದಾಯಕ್ಕೆ ವ್ಯಾಪಾರ ಮಾಡಲು ಅವಕಾಶ ನಿರಾಕರಿಸಿತ್ತು. ದೇವಸ್ಥಾನದ ಆವರಣದಲ್ಲಿನ ಎಲ್ಲ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ದೇವಸ್ಥಾನಕ್ಕೆ ಸಂಬಂ ಧಿಸಿದ ಜಾಗೆ ಹೊರತುಪಡಿಸಿ ದೂರದಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಿಕೊಂಡಿದ್ದು, ಅಲ್ಲಿಂದಲೇ ಭಕ್ತರು ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಪೂಜಾ ವಸ್ತುಗಳನ್ನು ತಂದು ದೇವರಿಗೆ ಅರ್ಪಿಸಿದರು.

ದೇವಸ್ಥಾನದಲ್ಲಿ ಗದ್ದಲ-ಗೊಂದಲ ಸೃಷ್ಟಿಯಾಗಬಾರದು ಎಂದು ಪೊಲೀಸ್‌ ಪಹರೆ ವ್ಯವಸ್ಥೆ ಮಾಡಲಾಗಿತ್ತು. ಧಾರವಾಡದ ಮುದಿ ಮಾರುತಿ ದೇವಸ್ಥಾನ, ಲೈನ್‌ ಬಜಾರ ಹನುಮಂತ ದೇವಸ್ಥಾನಗಳಲ್ಲಿ ಅದ್ಧೂರಿಯಾಗಿ ಹನುಮ ಜಯಂತಿ ಆಚರಿಸಲಾಯಿತು.

Advertisement

ಇಲ್ಲಿಯ ಶಾಂತಿನಿಕೇತನ ನಗರದಲ್ಲಿನ ಕರೆಮ್ಮ ದೇವಸ್ಥಾನದಲ್ಲಿ ಶನಿವಾರ ಹನುಮ ಜಯಂತಿ ಅಂಗವಾಗಿ ಸುಮಂಗಲೆಯರಿಂದ ತೊಟ್ಟಿಲೋತ್ಸವ ಜರುಗಿತು. ಕೆ.ಸಿ. ಪಾರ್ಕ್‌ ಬಳಿಯ ಡಯಟ್‌ ರಸ್ತೆಯಲ್ಲಿರುವ ದಾಮೋದರ ಆವರಣದಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಹನುಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಂಗಲೆಯರಿಂದ ತೊಟ್ಟಿಲೋತ್ಸವ ನಡೆಯಿತು. ಮದಿಹಾಳದ ಮಾರುತಿ ದೇವಸ್ಥಾನದಲ್ಲೂ ಹನುಮ ಜಯಂತಿ ನಿಮಿತ್ತ ತೊಟ್ಟಿಲೋತ್ಸವ ಜರುಗಿತು.

ನಂತರ ನಡೆದ ರಥೋತ್ಸವದಲ್ಲಿ ಇಷ್ಟಾರ್ಥ ಸಿದ್ಧಿಗೆ ಭಕ್ತರು ಲಿಂಬೆಹಣ್ಣು, ಉತ್ತತ್ತಿ, ಬಾಳೆಹಣ್ಣು ಎಸೆದು ಪ್ರಾರ್ಥಿಸಿದರು. ಸಮೀಪದ ಮಾಳಮಡ್ಡಿ ಗೌಳಿಗಲ್ಲಿಯ ಮಾರುತಿ ದೇವಸ್ಥಾನದಲ್ಲಿ ವಿಶೇಷ ಹೋಮ ಮಾಡಲಾಯಿತು. ಕಾಮನಕಟ್ಟಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹನುಮಂತ ದೇವರ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ಮೂರ್ತಿ ಅಲಂಕಾರ, ಅಭಿಷೇಕಗಳು ನಡೆದವು. ಕೆಲವು ಗ್ರಾಮಗಳಲ್ಲಿ ಜಾತ್ರೆಯೂ ಇದ್ದು, ಅದ್ಧೂರಿಯಿಂದ ನಡೆಯಿತು. ಯಾದವಾಡ ಗ್ರಾಮದಲ್ಲಿ ಹನುಮಂತ ದೇವರ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಪೂಜೆಗಳೊಂದಿಗೆ ತೊಟ್ಟಿಲೋತ್ಸವ ಜರುಗಿತು. ಸಂಜೆ 5 ಗಂಟೆಗೆ ರಥೋತ್ಸವ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next