Advertisement

ದೊರೆಸ್ವಾಮಿ ಮಠದಲ್ಲಿ ನಿತ್ಯ ಭುವನೇಶ್ವರಿಗೆ ಪೂಜೆ

08:22 PM Nov 01, 2021 | Team Udayavani |

ನರಗುಂದ: ಕನ್ನಡ ಕೈಂಕರ್ಯದೊಂದಿಗೆ ಈ ಮಠದಲ್ಲಿ ನಡೆಯುತ್ತೆ ಪ್ರತಿವರ್ಷ ಕನ್ನಡ ಜಾತ್ರೆ. ಎಳೆಯಲಾಗುತ್ತದೆ ಕನ್ನಡದ ರಥ. ಅಷ್ಟೇ ಅಲ್ಲ, ರಾಜ್ಯೋತ್ಸವ ಪ್ರಯುಕ್ತ ಪಂಚಲೋಹದ ಭುವನೇಶ್ವರಿ ಮೂರ್ತಿ ಮೆರವಣಿಗೆ ನಡೆಸುವುದಲ್ಲದೇ ಭುವನೇಶ್ವರಿಗೆ ಇಲ್ಲಿ ಪ್ರತಿದಿನ ಪೂಜೆ ನೆರವೇರು ತ್ತದೆ. ನಿತ್ಯ ಕನ್ನಡ ಬಾವುಟ ಹಾರಾಡುವ ಈ ಮಠವೇ ನರಗುಂದ ತಾಲೂಕು ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠ.

Advertisement

ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಈ ಶ್ರೀಮಠದ ಈ ಎಲ್ಲ ಕೀರ್ತಿಗೆ ಭಾಜನರಾದವರು ಶ್ರೀ ಶಾಂತಲಿಂಗ ಸ್ವಾಮೀಜಿ ಎಂಬುದು ಕೂಡ ಅಷ್ಟೇ ಗಮನಾರ್ಹ. ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರನ್ನೊಳಗೊಂಡು ನಾಡಿನ ಸಾಹಿತಿಗಳು, ಪತ್ರಕರ್ತರು, ಕನ್ನಡ
ಹೋರಾಟಗಾರರು, ಸಂತರು-ಶರಣರು ಭೇಟಿ ನೀಡಿದ್ದು, ಶ್ರೀಮಠದಲ್ಲಿ ನಿತ್ಯ ಕನ್ನಡ ದಾಸೋಹ ನಡೆಯುತ್ತದೆ.

ಶ್ರೀಗಳ ಹಿರಿಮೆ: 1976ರಲ್ಲಿ ಭೈರನಹಟ್ಟಿ ಗ್ರಾಮದಲ್ಲಿ ಜನಿಸಿದ ಶ್ರೀ ಶಿವಪುತ್ರಯ್ಯ ನಾಮಾಂಕಿತರಾದ ಶ್ರೀಗಳು,ಬಾಲ್ಯದಿಂದಲೂ ಕನ್ನಡದ ಮೇಲೆ ಅಪಾರ ಕಾಳಜಿ ಹೊಂದಿದವರು. ಹಾವೇರಿ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಸ್ಥಾಪಿಸಿದ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ಆಧ್ಯಾತ್ಮಿಕ ಅಧ್ಯಯನ ಮಾಡಿ 1996ರಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠಕ್ಕೆ ನಿಯೋಜಿತಗೊಂಡರು.

ಗದುಗಿನ ತೋಂಟದ ಲಿಂ| ಡಾ| ಸಿದ್ದಲಿಂಗ ಮಹಾಸ್ವಾಮಿಗಳ ಅಪ್ಪಣೆಯಂತೆ 2011ರಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಎಂದು ನಾಮಾಂಕಿತಗೊಂಡು, ಅವರ ಮಾರ್ಗದರ್ಶನದಲ್ಲಿ ಕನ್ನಡ ಸೇವೆಗೆ ಅಣಿಯಾಗಿ ಮಾಸಿಕ ಶಿವಾನುಭವ ಏರ್ಪಡಿಸಿ ನಾಡು-ನುಡಿ, ನೆಲ-ಜಲ ಬಗ್ಗೆ ಜಾಗೃತಿ ಮೂಡಿಸಿ ಶ್ರೀಮಠವನ್ನು ಆಧ್ಯಾತ್ಮ ಹಾಗೂ ಕನ್ನಡದ ಕೇಂದ್ರವನ್ನಾಗಿಸಿದರು. ಕನ್ನಡಕ್ಕೆ ಧಕ್ಕೆ ಬಂದಾಗ ದ್ವನಿ ಎತ್ತಿ ಹೋರಾಟ, ವಿಚಾರ ಸಂಕಿರಣ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ನವೆಂಬರ್‌ ತಿಂಗಳಲ್ಲಿ ಕನ್ನಡ ಜಾಗೃತಿ ಅಭಿಯಾನ ಹಮ್ಮಿಕೊಂಡು ಕನ್ನಡ ಕೈಂಕರ್ಯ ಜೊತೆಗೆ ಶ್ರೀಮಠವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸಿದ ಶ್ರೀಗಳ ಸಾಹಿತ್ಯಿಕ ಸೇವೆ ಅಮೋಘವಾದದ್ದು.

ಪ್ರತಿವರ್ಷ ಎಸ್‌.ಎಸ್‌.ಎಲ್‌.ಸಿ, ಪಿ.ಯು.ಸಿಯಲ್ಲಿ ಕನ್ನಡಕ್ಕೆ ಅತೀಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕನ್ನಡ ರತ್ನ ಪ್ರಶಸ್ತಿ, ಯುವ ಸಾಹಿತಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿ ಕನ್ನಡ ಏಳ್ಗೆಗೆ ಸದಾ ಶ್ರಮಿಸುತ್ತಿರುವ ಕನ್ನಡದ ಸ್ವಾಮೀಜಿ ಎನಿಸಿಕೊಂಡವರು ಶಾಂತಲಿಂಗ ಶ್ರೀಗಳು. ಸ್ವತಃ ಸಾಹಿತಿಗಳಾದ ಪೂಜ್ಯರು ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪುಸ್ತಕ ಪ್ರಿಯರೂ ಆಗಿದ್ದಾರೆ. ಗ್ರಂಥಾಲಯ ಸ್ಥಾಪಿಸಿ ಆಧ್ಯಾತ್ಮಿಕ, ಸಾಹಿತ್ಯಿಕ ಸಾವಿರಾರು ಪುಸ್ತಕ ಸಂಗ್ರಹಿಸಿ ಗ್ರಾಮೀಣ ಜನರಿಗೆ ಓದುವ ಹವ್ಯಾಸ ಬೆಳೆಸಿದ್ದಾರೆ.

Advertisement

ಶಾಸ್ತ್ರೀಯ ಸ್ಥಾನಕ್ಕಾಗಿ ಪಾದಯಾತ್ರೆ
2007ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕೆ ಒತ್ತಾಯಿಸಿ ಗದುಗಿನ ತೋಂಟದ ಲಿಂ| ಡಾ| ಸಿದ್ದಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀಮಠದಿಂದ ನರಗುಂದದವರೆಗೆ ಪಾದಯಾತ್ರೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಮೊದಲ ಸ್ವಾಮೀಜಿ ಶಾಂತಲಿಂಗ ಶ್ರೀಗಳು. ಶಾಸ್ತ್ರೀಯ ಸ್ಥಾನಮಾನಕ್ಕಾಗಿ ರಾಜ್ಯದ 28 ಸಂಸದರು, 225 ಶಾಸಕರಿಗೆ ಪತ್ರ ಚಳವಳಿ ಮೂಲಕ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಜಾಗೃತಿ ಮೂಡಿಸಿದ ಫಲವಾಗಿ 2008ರಲ್ಲಿ ಕೇಂದ್ರದಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿತು.

*ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next